ಬಂಕುರಾ, ನ. 25 (DaijiworldNews/MB) : ''ಕೇಸರಿ ಪಕ್ಷ ನನ್ನನ್ನು ಬಂಧಿಸಿದರೂ ಮುಂಬರುವ ಚುನಾವಣೆಯಲ್ಲಿ ಜೈಲಿನಿಂದಲೇ ತಾವು ಟಿಎಂಸಿಯನ್ನು ಗೆಲ್ಲಿಸುತ್ತೇನೆ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಕೊರೊನಾ ಬಳಿಕ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಮಮತಾ ಬ್ಯಾನರ್ಜಿಯವರು, ಬಿಜೆಪಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು "ಸುಳ್ಳಿನ ಕಸ" ಮತ್ತು "ರಾಷ್ಟ್ರದ ಅತಿದೊಡ್ಡ ಶಾಪ" ಎಂದು ಟೀಕಿಸಿದ್ದಾರೆ.
''ಬಿಜೆಪಿಯು ಒಂದು ರಾಜಕೀಯ ಪಕ್ಷವಾಗಿಲ್ಲ. ಅದು ಸುಳ್ಳಿನ ಕಸವಾಗಿದೆ. ಚುನಾವಣೆ ಬಂದ ಸಂದರ್ಭದಲ್ಲಿ ಅವರು ಟಿಎಂಸಿ ನಾಯಕರನ್ನು ಬೆದರಿಸಲೆಂದು ನಾರದ (ಕುಟುಕು ಕಾರ್ಯಾಚರಣೆ) ಮತ್ತು ಶಾರದಾ (ಹಗರಣ) ವಿಚಾರವನ್ನು ಅವರು ಮುನ್ನೆಲೆಗೆ ತರುತ್ತಾರೆ'' ಎಂದು ದೂರಿದರು.
ಇನ್ನು ಬಿಜೆಪಿಯವರು ಅಧಿಕಾರ ಪಡೆಯುವ ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿರುವ ಮಮತಾ, ''ಬಿಜೆಪಿಯವರ ಯಾವ ಬೆದರಿಕೆಗೂ ನಾವು ಭಯಪಡಲ್ಲ. ಅವರಿಗೆ ತಾಕತ್ತಿದ್ದರೆ ನನ್ನನ್ನು ಜೈಲಿಗೆ ಹಾಕಲಿ. ನಾನು ಜೈಲಿನಿಂದಲ್ಲೇ ಟಿಎಂಸಿಯನ್ನು ಗೆಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.
ಹಾಗೆಯೇ, ''ಬಿಜೆಪಿಯು ಟಿಎಂಸಿ ಶಾಸಕರಿಗೆ ಲಂಚ ನೀಡಲು ಯತ್ನಿಸಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿದೆ'' ಎಂದು ನೇರವಾಗಿ ಯಾರ ಹೆಸರನ್ನು ಉಲ್ಲೇಖ ಮಾಡದೆ ಆರೋಪ ಮಾಡಿದ್ದಾರೆ.