ಬೆಂಗಳೂರು, ನ.20 (DaijiworldNews/PY): "ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ" ಎಂದು ರಾಜ್ಯ ಬಿಜೆಪಿ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಈಗಾಗಲೇ ಸರ್ಕಾರಕ್ಕೆ ಈ ಕುರಿತು ಸಲಹೆ ನೀಡಿದ್ದಾರೆ. ಇದರ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸಚಿವ ಪ್ರಭು ಚೌಹಾಣ್ ಅವರೊಂದಿಗೆ ಚರ್ಚಿಸಿದ್ದಾರೆ" ಎಂದು ಹೇಳಿದೆ.
"ಗೋ ಹತ್ಯೆ ನಿಷೇಧ ಜಾರಿಗೊಳಿಸಲು ಬಿಜೆಪಿ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮಸೂದೆ ಮಂಡಿಸಲಿದೆ. ರಾಜ್ಯದ ಜನತೆಯ ಅಪೇಕ್ಷೆ ಶೀಘ್ರವಾಗಿ ನೆರವೇರಲಿದೆ" ಎಂದು ತಿಳಿಸಿದೆ.
ಈ ಬಗ್ಗೆ ಸಿ.ಟಿ. ರವಿ ಅವರು ಕೂಡಾ ಟ್ವೀಟ್ ಮಾಡಿದ್ದು, "ರಾಜ್ಯದಲ್ಲಿ ಶೀಘ್ರವೇ ಗೋ ಹತ್ಯೆ ಕಾಯ್ದೆ ಜಾರಿಗೆ ಬರಲಿದೆ. ಮುಂದಿನ ಅಧಿವೇಶದಲ್ಲಿ ಗೋವು ಕಳ್ಳತನ, ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಈ ವಿಚಾರವಾಗಿ ಪ್ರಭು ಚೌಹಾಣ್ ಅವರೊಂದಿಗೆ ಚರ್ಚಿಸಲಾಗಿದೆ" ಎಂದಿದ್ದಾರೆ.