ಬೆಂಗಳೂರು, ನ. 13 (DaijiworldNews/SM): ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಆದರೆ, ಸಂಪುಟ ವಿಸ್ತರಣೆ ವಿಚಾರ ನಾನಾ ಕಾರಣಗಳಿಂದ ಮುಂದೂಡಲ್ಪಡುತ್ತಿದ್ದು, ಇದೀಗ ಮತ್ತೆ ವಿಳಂಬವಾಗಿದೆ.

ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಭೇಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೂಡಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಲಿದ್ದು, ದೀಪಾವಳಿಯ ಬಳಿಕವಷ್ಟೇ ಸಂಪುಟ ವಿಸ್ತಣೆಯಾಗಲಿದೆ ಎನ್ನಲಾಗಿದೆ.
ಬಿಹಾರ ಮುಖ್ಯಮಂತ್ರಿ ಆಯ್ಕೆ ಹಾಗೂ ಸರ್ಕಾರ ರಚನೆಯಲ್ಲಿ ವರಿಷ್ಠರು ನಿರತರಾಗಿರುವುದರಿಂದ ಸದ್ಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ವರಿಷ್ಟರನ್ನು ಭೇಟಿಯಾಗಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಚಾರವನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.
ಇನ್ನು ಈ ಬಗ್ಗೆ ಸುದ್ದಿಗಾರರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಇವತ್ತು ದೆಹಲಿಗೆ ಹೋಗಬೇಕೆಂಬ ಅಲೋಚನೆಯಿತ್ತು. ಆದರೆ, ಬಿಹಾರ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ವರಿಷ್ಠರು ನಿರತರಾಗಿದ್ದಾರೆ. ಇನ್ನು ಬಿಹಾರದಲ್ಲಿ ಮುಖ್ಯಮಂತ್ರಿ ಆಯ್ಕೆಯಾಗಿ ಸರಕಾರ ಅಧಿಕಾರಕ್ಕೇರಿದ ಬಳಿಕವಷ್ಟೇ ವರಿಷ್ಟರನ್ನು ಭೇಟಿಯಾಗುವ ಅವಕಾಶವಿರಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.