ಬೆಂಗಳೂರು, ನ. 06 (DaijiworldNews/MB) : ಕರ್ನಾಟಕ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ಏರಿಕೆಯಾಗುತ್ತಿದ್ದು ಈ ನಡುವೆ ಹೊಸ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಗುರುವಾರ ಒಂದು ದಿನದಲ್ಲಿ 5,723 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಒಂದು ದಿನದಲ್ಲಿ 3,156 ಜನರಲ್ಲಿ ಸೋಂಕು ಪತ್ತೆಯಾಗಿರುವ ಮುಖೇನ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಮುಖಮಾಡಿದೆ.

ಗುರುವಾರ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಒಂದು ದಿನದಲ್ಲಿ 5,723 ಮಂದಿ ಗುಣಮುಖರಾಗಿದ್ದು ಈವರೆಗೆ 7,94,503 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ 3,156 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 8,38,929 ಕ್ಕೆ ಏರಿಕೆಯಾಗಿದೆ. ಈ ಪೈಕಿ 33,095 ಪ್ರಕರಣಗಳು ಸಕ್ರಿಯವಾಗಿದೆ. ಒಂದು ದಿನದಲ್ಲಿ 19 ಮಂದಿ ಸೋಂಕಿತರು ಸಾವನ್ನಪ್ಪಿದ್ದು ರಾಜ್ಯದಲ್ಲಿ ಈವರೆಗೆ 11,312 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇನ್ನು ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಬೆಂಗಳೂರಿನಲ್ಲಿ 1,627 ಹೊಸ ಪ್ರಕರಣಗಳು ವರದಿಯಾಗಿದ್ದು, 16,716 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 3,45,134 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 3,708 ಮಂದಿ ಗುಣಮುಖರಾಗಿದ್ದು ಈವರೆಗೆ 3,24,491 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ತೀವ್ರ ನಿಗಾ ಘಟಕಗಳಲ್ಲಿ 916 ರೋಗಿಗಳಿದ್ದು ಈ ಪೈಕಿ 464 ಮಂದಿ ಬೆಂಗಳೂರು, 38 ಮಂದಿ ಬಳ್ಳಾರಿ, ತುಮಕೂರು, 36 ಮಂದಿ ಹಾಸನ, 28 ಮಂದಿ ಮೈಸೂರು, 26 ಮಂದಿ ಮಂಡ್ಯದ ಆಸ್ಪತ್ರೆಯಲ್ಲಿ ಇದ್ದಾರೆ.