ಬೆಂಗಳೂರು, ಜ 15 (Daijiworld News/MSP): ಬೆಂಗಳೂರು ದಕ್ಷಿಣ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ‘ಅಲ್ಲಾಡ್ಸು-ಅಲ್ಲಾಡ್ಸು’ ಹಾಡೊಂದಕ್ಕೆ ಶಿಕ್ಷಕಿಯರ ತಂಡ ವೇದಿಕೆಯಲ್ಲಿ ಹೆಜ್ಜೆ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಆಗಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಘಟನೆಯ ಕುರಿತು ಶಾಲೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಸರ್ಕಾರಿ ಶಾಲೆಯ ವೇದಿಕೆಯಲ್ಲಿ ಶಿಕ್ಷಕಿಯರು ಡಾನ್ಸ್ ಹೆಜ್ಜೆ ಹಾಕಿರುವುದನ್ನು 'ಅಸಭ್ಯ' ನೃತ್ಯ ಎಂದು ಪರಿಗಣಿಸಿ ಈ ನೋಟೀಸ್ ನೀಡಲಾಗಿದೆ.
"ಶಿಕ್ಷಕ ವೃತ್ತಿಗೆ ತರವಲ್ಲದ ರೀತಿಯಲ್ಲಿ ನೃತ್ಯ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಾಂಜನೇಯ ರಸ್ತೆ ಹನುಮಂತನಗರ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ರೀತಿಯ ನೃತ್ಯಗಳು ಶೈಕ್ಷಣಿಕ ಮಾನಸಿಕ ಹಾಗೂ ಬೌದ್ದಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ.
"ಜವಬ್ದಾರಿಯುತ ಮತ್ತು ಸಮಾಜದಲ್ಲಿ ಗೌರವಯುತ ಹುದ್ದೆಯಲ್ಲಿರುವ ಶಿಕ್ಷಕರು ಈ ರೀತಿ ವರ್ತಿಸಿರುವುದು, ಹಾಗೂ ಅನುಮತಿ ನೀಡಿರುವುದು ನಿಯಮಕ್ಕೆ ವಿರುದ್ದವಾಗಿದೆ. ಇದು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಕರ್ತವ್ಯ ಲೋಪ ಹಾಗೂ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಮ್ಮ ಮೇಲೆ ಶಿಸ್ತು ಕ್ರಮ ಜರಗಿಸಬಾರದೇಕೆ ಎಂದು ಲಿಖಿತ ಸಮಜಾಯಿಷಿ ನೀಡಲು ಸೂಚಿಸಿದೆ" ಎಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಪಕ್ಕೆಲುಬು ಉಚ್ಚರಿಸುವಂತೆ ಹೇಳಿ ಥಳಿಸಿದ ವಿಡಿಯೋ ಒಂದು ವೈರಲ್ ಆಗಿತ್ತು. ಶಿಕ್ಷಕರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಶಿಕ್ಷಕರನ್ನು ಸಚಿವ ಸುರೇಶ್ ಕುಮಾರ್ ಸೂಚನೆಯಂತೆ ಅಮಾನತು ಮಾಡಲಾಗಿತ್ತು.