ನವದೆಹಲಿ, ನ.06 (DaijiworldNews/AA): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚಿಗೆ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸದ ಮಧ್ಯಪ್ರದೇಶದ 60 ಯುವ ಕಾಂಗ್ರೆಸ್ ನಾಯಕರನ್ನು ಅಮಾನತು ಮಾಡಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ನವೆಂಬರ್ 1 ರಂದು ನವದೆಹಲಿಯ ರಾಮ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷವು ರ್ಯಾಲಿಯನ್ನು ಆಯೋಜಿಸಿತ್ತು. ನಾಯಕರು ರ್ಯಾಲಿಗೆ ಗೈರುಹಾಜರಾಗಿರುವುದು ಸಾಂಸ್ಥಿಕ ಶಿಸ್ತು ಉಲ್ಲಂಘನೆಯಾಗಿದ್ದು, ಮುಂದಿನ ಆದೇಶದವರೆಗೆ ಈ ಕ್ರಮ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಮಧ್ಯಪ್ರದೇಶದ ಐವರು ಉಪಾಧ್ಯಕ್ಷರು, 14 ಪ್ರಧಾನ ಕಾರ್ಯದರ್ಶಿಗಳು, 32 ಕಾರ್ಯದರ್ಶಿಗಳು ಮತ್ತು 9 ಜಿಲ್ಲಾ ಅಧ್ಯಕ್ಷರು ಸೇರಿದಂತೆ ಒಟ್ಟು 60 ಪದಾಧಿಕಾರಿಗಳನ್ನು ಯುವ ಕಾಂಗ್ರೆಸ್ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.
ತಮ್ಮ ಕುಟುಂಬದಲ್ಲಿನ ಅನಾರೋಗ್ಯ ಅಥವಾ ಅಂತ್ಯಕ್ರಿಯೆಯಂತಹ ತುರ್ತು ವೈಯಕ್ತಿಕ ಕಾರಣಗಳಿಂದಾಗಿ ನವೆಂಬರ್ 1 ರಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಶಿಸ್ತು ಕ್ರಮ ಕ್ಷೇತ್ರಗಳಲ್ಲಿ ತಮ್ಮನ್ನು ಅಪಹಾಸ್ಯ ಮಾಡಲು ಬಿಜೆಪಿಗೆ ಸುಲಭವಾದ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ಅಮಾನತುಗೊಂಡ ನಾಯಕರು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಹಲವು ನಾಯಕರು 'ಏಕಪಕ್ಷೀಯ' ಮತ್ತು 'ಪ್ರಜಾಪ್ರಭುತ್ವ ವಿರೋಧಿ' ಎಂದು ಕರೆದಿದ್ದು, ತಮ್ಮ ವಿರುದ್ಧ ಈ ಕ್ರಮ ಕೈಗೊಳ್ಳುವ ಮೊದಲು ಕನಿಷ್ಠ ಪಕ್ಷ 'ಕಾರಣ ಕೇಳುವ ನೋಟಿಸ್' ಕೂಡ ನೀಡಿಲ್ಲ ಎಂದು ನಾಯಕರು ಆರೋಪಿಸಿದ್ದಾರೆ.