ಮೈಸೂರು, ನ.05 (DaijiworldNews/AK): ಕೆಲವರಿಗೆ ಹೇಗಾದರೂ ಮಾಡಿ ಒಂದು ಬಾರಿಯಾದರೂ ಪ್ರಧಾನಿ ಆಗುವ ಕನಸಿದೆ. ರಾಹುಲ್ ಗಾಂಧಿಗೆ ಮದುವೆಯೂ ಆಗಿಲ್ಲ; ಹುಚ್ಚು ಬಿಡುತ್ತಿಲ್ಲ; ಪ್ರಧಾನಿ ಆಗುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಇಂದು ಇಲ್ಲಿ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ - ಪಾದಯಾತ್ರೆ’ ಸಂದರ್ಭದಲ್ಲಿ ಅವರು ಮಾತನಾಡಿದರು. ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆಯನ್ನು ಉದ್ಘಾಟಿಸಲಾಯಿತು. ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಪರಿವರ್ತನೆ ಹೊಂದಿದೆ. ಇದನ್ನು ಸಹಿಸಿಕೊಳ್ಳಲು ರಾಹುಲ್ ಗಾಂಧಿಯವರಿಗೆ ಆಗುತ್ತಿಲ್ಲ ಎಂದು ದೂರಿದರು.
ರಾಹುಲ್ ಗಾಂಧಿಯವರು ಅನಿವಾಸಿ ವಿರೋಧ ಪಕ್ಷದ ನಾಯಕ. ಇವರ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು. ಎನ್ಡಿಎ ಸರಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಲು ಇವರ ಸಂಚು, ಷಡ್ಯಂತ್ರ ಎಂದರು. 4ನೇ ಬಾರಿಗೆ ಮೋದಿಯವರು ಪ್ರಧಾನಿ ಆಗುವ ಆತಂಕ ಕಾಂಗ್ರೆಸ್ಸಿನವರದು. ಇದಕ್ಕಾಗಿ ದೆಹಲಿ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ದೇಶದಲ್ಲಿ ಗೊಂದಲ ನಿರ್ಮಿಸಿ, ಯುವಜನರನ್ನು ಬೀದಿಗೆ ತಂದು ಕೇಂದ್ರ ಸರಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯತ್ತ ಮುನ್ನಡೆದಿದೆ. ಭಯೋತ್ಪಾದನೆ ಮೂಲೋತ್ಪಾಟನೆ ಆಗಿದೆ. ನಕ್ಸಲಿಸಂ ಕಿತ್ತು ಹಾಕಲಾಗಿದೆ. ದೇಶದಲ್ಲಿ ಶಾಂತಿಯುತ ಪರಿಸ್ಥಿತಿ ಇದೆ. ದೇಶದ ಪ್ರಗತಿ ಸಹಿಸಲು ಸಾಧ್ಯವಾಗದೇ ಕಮ್ಮಿ ನಿಷ್ಠೆ ಉಳ್ಳವರನ್ನು ಕರೆದುಕೊಂಡು ದೇಶಕ್ಕೆ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಜಾರ್ಖಂಡ್ ಸಚಿವ ಅನ್ಸಾರಿ, ರಾಹುಲ್ ಗಾಂಧಿ ಮನಸ್ಸು ಮಾಡಿದರೆ 40 ಲಕ್ಷ ಜನರು ಬೀದಿಗಿಳಿದು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಇಂಥ ಅರಾಜಕತೆಯ ಕನಸು ಕಾಣುವವರ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು.