ಬೆಂಗಳೂರು, ನ.06 (DaijiworldNews/AA): ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ ತರುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪೆಟ್ರೋಲ್ನಲ್ಲಿ ಎಥೆನಾಲ್ ಬಳಕೆ ಕುರಿತು ವ್ಯಾಪಕ ಗೊಂದಲ ಹಾಗೂ ಮಾಧ್ಯಮ ವರದಿಗಳು ಬಂದ ಹಿನ್ನೆಲೆಯಲ್ಲಿ, ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಒಟ್ಟು 63 ಇಂಧನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಆರಂಭದಲ್ಲಿ ಇ-20 ಪರೀಕ್ಷೆಗಾಗಿ ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಲ್ಯಾಬ್ಗಳಿಗೆ ಕಳುಹಿಸಲಾಯಿತಾದರೂ ಅಲ್ಲಿ ಎಥೆನಾಲ್ ಪ್ರಮಾಣದ ನಿಖರ ಮಾಹಿತಿ ನೀಡಲು ಹಿಂದೇಟು ಹಾಕಲಾಯಿತು. ಹೀಗಾಗಿ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾದ ಸ್ಯಾಂಪಲ್ಗಳ ಪೈಕಿ 5 ಸ್ಯಾಂಪಲ್ಗಳಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಇರುವುದು ದೃಢಪಟ್ಟಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಬರೋಬ್ಬರಿ ಶೇ. 31.02 ರಷ್ಟಿರುವುದು ಪತ್ತೆಯಾಗಿದೆ" ಎಂದು ಹೇಳಿದರು.
"ದೇಶದಲ್ಲಿ ಸಂಚರಿಸುತ್ತಿರುವ ಸುಮಾರು 35 ಕೋಟಿ ವಾಹನಗಳ ಪೈಕಿ ಶೇ.99 ರಷ್ಟು ವಾಹನಗಳು ಇ-20 ಗಿಂತ ಹೆಚ್ಚಿನ ಇಂಧನ ಸಂಯೋಜನೆಗೆ ಸೂಕ್ತವಾಗಿ ವಿನ್ಯಾಸಗೊಂಡಿಲ್ಲ. ಅಲ್ಲದೆ, ಬಂಕ್ಗಳಲ್ಲಿರುವ ಹೆಚ್ಚಿನ ಇಂಧನ ಡಿಸ್ಪೆನ್ಸಿಂಗ್ ಯೂನಿಟ್ಗಳು ಕೇವಲ ಶೇ. 15 ರಷ್ಟು ಮಿಶ್ರಣಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ. ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಹೇಳುತ್ತಿದ್ದರೂ, ಅದರ ಕಿಂಚಿತ್ತೂ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ವಾಹನ ಮಾಲೀಕರು ಮೈಲೇಜ್ ಕೊರತೆ ಹಾಗೂ ದುರಸ್ತಿಯ ನಷ್ಟ ಅನುಭವಿಸುತ್ತಿದ್ದರೆ, ತೈಲ ಕಂಪನಿಗಳು ದಾಖಲೆಯ ಲಾಭ ಗಳಿಸುತ್ತಿವೆ. ಆಟೋಮೊಬೈಲ್ ಕಂಪನಿಗಳು ಕೂಡ ಸ್ಪೇರ್ ಪಾರ್ಟ್ಸ್ ಮತ್ತು ಸರ್ವೀಸ್ ಮೂಲಕ ಶೇ. 50 ರಷ್ಟು ಲಾಭ ಮಾಡಿಕೊಳ್ಳುತ್ತಿವೆ" ಎಂದು ವಾಗ್ದಾಳಿ ನಡೆಸಿದರು.
"ಎಥೆನಾಲ್ ಬಳಕೆಯಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂದು ನೀತಿ ಆಯೋಗವೇ ಹೇಳಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದನ್ನು 'ಪೇಯ್ಡ್ ಕ್ಯಾಂಪೇನ್' ಎನ್ನುತ್ತಿದೆ. ಹಾಗಾದರೆ ಇಲ್ಲಿ ಪಾವತಿ ಮಾಡುತ್ತಿರುವುದು ಯಾರು? ಜನಸಾಮಾನ್ಯರೇ ಪಾವತಿ ಮಾಡುತ್ತಿರುವುದು ಅಲ್ವೇ? ಎಂದು ಪ್ರಶ್ನಿಸಿದರು.
"ಹೆದರಬೇಡಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ನನ್ನ ಮೇಲಿಟ್ಟ ವಿಶ್ವಾಸಕ್ಕೆ ತಕ್ಕಂತೆ, ಜನರ ಹಿತರಕ್ಷಣೆಗಾಗಿ ಪ್ರಮಾಣವಚನ ಸ್ವೀಕರಿಸಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಹಿನ್ನಡೆಯಾಗುವ ಭಯ ನನಗಿಲ್ಲ, ಜನರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇನೆ" ಎಂದರು.