ಮೈಸೂರು,ನ.06 (DaijiworldNews/AK): ಭಾರತದ ಸಂವಿಧಾನಕ್ಕೆ ಅಪಚಾರ ಮಾಡುವ ಹಾಗೂ ಅರಾಜಕತೆಯ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಕ್ಷೇಪಿಸಿದ್ದಾರೆ.

‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ - ಪಾದಯಾತ್ರೆ’ ಸಂದರ್ಭದಲ್ಲಿ ಅವರು ಮಾತನಾಡಿದರು. ಎಸ್ಐಆರ್ ವೇಳೆ 13 ಕೋಟಿ ಜನರ ಹೆಸರು ಮತಪಟ್ಟಿಯಿಂದ ತೆಗೆಯಲಾಗಿದೆ. ಸ್ಥಳಾಂತರ ಹೊಂದಿದವರು, ಮೃತರು, ನಕಲಿ ಮತದಾರರನ್ನು ಕೈಬಿಡಲಾಗಿದೆ ಎಂದು ವಿವರಿಸಿದರು. ಸ್ಪಷ್ಟ ಮಾಹಿತಿ ಇದ್ದರೂ ಬೇಕೆಂದೇ ನಾಟಕ ಮಾಡುತ್ತಿದ್ದಾರೆ. ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಇಂಡಿ ಒಕ್ಕೂಟದ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಹಿಂದಿನ ಯುಪಿಎ ಸರಕಾರವು ಹಗರಣಗಳ ಸರಕಾರವಾಗಿತ್ತು ಎಂದು ಟೀಕಿಸಿದರು. ಇವರಿಗೆ ಪ್ರಜಾಪ್ರಭುತ್ವ ಬೇಡ; ಅರಾಜಕತೆಯೇ ಬೇಕಿದೆ ಎಂದು ದೂರಿದರು.
ಕಾಂಗ್ರೆಸ್ಸಿನವರು ಅರಾಜಕತೆಯ ವಕ್ತಾರರು ಎಂದು ಆರೋಪಿಸಿದರು. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಪಡೆಯಲಿದೆ. ಇಲ್ಲಿಯೂ ಎನ್ಡಿಎ ಸರಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.