ನವದೆಹಲಿ, ನ.06 (DaijiworldNews/AK): ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರ ಪಂಚಾಯತ್ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು, ಫಲಾನುಭವಿಗಳ ಗುರುತಿಸುವಿಕೆ ಮತ್ತು ಪಾವತಿಗಳಿಗಾಗಿ ಇನ್ನು ಮುಂದೆ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸುವುದು ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ.
ಎಲ್ಲೆಡೆ ಸುಲಭವಾಗಿ ಲಭ್ಯವಿರುವ ನೋಂದಣಿ ಕೇಂದ್ರಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಆಧಾರ್ ಕಾರ್ಡ್ ಪಡೆಯಬಹುದಾಗಿರುವುದರಿಂದ, ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂದು ಸಚಿವರು ವಾದಿಸಿದ್ದಾರೆ.
ಪಂಚಾಯತ್ ರಾಜ್ ಸಚಿವಾಲಯವು ವೈಯಕ್ತಿಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಗಳನ್ನು ನೇರವಾಗಿ ನಿರ್ವಹಿಸುವುದಿಲ್ಲ. ಜತೆಗೆ ಯಾವೆಲ್ಲಾ ಯೋಜನೆಗಳು ಈ ಹೊಸ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.