ಬೆಂಗಳೂರು, ನ.05 (DaijiworldNews/AK): ಎಸ್.ಐ.ಆರ್ ಸಂಬಂಧ ಕಾಂಗ್ರೆಸ್ ದೇಶದಾದ್ಯಂತ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ದೇಶದಾದ್ಯಂತ ಅರಾಜಕತೆಯನ್ನು ಹಬ್ಬಿಸುತ್ತಿದೆ. ಆದರೆ ಬಿಜೆಪಿ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಸಂಬಂಧ ಬಿಜೆಪಿ ಯುವಜನತೆ, ಮಾಧ್ಯಮಗಳು ಮತ್ತು ಸಾಮಾನ್ಯ ಜನರೊಂದಿಗೆ ಸಂವಾದ ನಡೆಸುತ್ತಿದೆ. ಒಂದು ನಿರ್ದಿಷ್ಟ ನೋಟ ಮತ್ತು ದೃಷ್ಟಿಕೋನ ಇಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.
ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಇವನ್ನೆಲ್ಲ ಬಿಜೆಪಿ ಮಾಡುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕು ಎಂದು ಎಲ್ಲರನ್ನು ತಲುಪುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸತ್ಯ ಏನು ಎಂದು ಜನರಿಗೆ ಅರಿವಾಗಬೇಕು. ದೇಶದ ಸಾಂವಿಧಾನಿಕ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದು ತಿಳಿಯಬೇಕು ಎಂದು ವಿವರಿಸಿದರು
ನೋ ಡಾಟ.. ಓನ್ಲಿ ಗಲಾಟ...
ರಾಹುಲ್ ಗಾಂಧಿ ಅವರಿಗೆ ದೇಶದ ಆಗುಹೋಗುಗಳ ಬಗ್ಗೆ ಯಾವುದೇ ಅಂಕಿಅಂಶ ಮತ್ತು ಮಾಹಿತಿ ಇರುವುದಿಲ್ಲ. ಅವರು ಗಲಾಟೆ ಮಾತ್ರ ಮಾಡ್ತಾರೆ. ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅವರಿಗೆ ತಿಳಿವಳಿಕೆಯೇ ಇಲ್ಲ. ಆದರೆ ಅರಾಜಕತೆ ರೀತಿ ಬೀದಿಯಲ್ಲಿ ಗಲಾಟೆ ಮಾಡ್ತಾರೆ. ಆದರೆ ಇವರು ಮೋದಿ ಅವರೊಂದಿಗೆ ಚರ್ಚೆ ಮಾಡಬೇಕು ಎಂದು ಬಯಸುತ್ತಾರೆ ಎಂದು ಡಾ. ಸಂಬಿತ್ ಪಾತ್ರಾ ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಐದಾರು ನಿಮಿಷವೂ ಕೂರುವುದಿಲ್ಲ. ಹೊರಗೆ ಹೋಗ್ತಾರೆ ಒಳಗೆ ಬರ್ತಾರೆ. ಇದಕ್ಕೆ ಬೇಕಾದರೆ ದಾಖಲೆಗಳನ್ನು ತೆಗೆದು ನೋಡಿ. ಅವರು ಆ ರೀತಿ ಮಾಡುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದು ಕಡೆ ಅವರು ಐದಾರು ನಿಮಿಷಗೂ ಶಾಂತಿಯಿಂದ ಕೂರುವುದಿಲ್ಲ. ಚರ್ಚೆಗೆ ಸಹ ಬರುವುದಿಲ್ಲ ಎಂದು ದೂರಿದರು.