ಮೈಸೂರು, ನ.05 (DaijiworldNews/TA): ನಾಡಿನ ಹೆಮ್ಮೆಯ ಪ್ರತೀಕ, ಜಗತ್ಪ್ರಸಿದ್ಧ ಮೈಸೂರು ಅರಮನೆಯ ಸುತ್ತ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ವಿವಾದಗಳು ಸದ್ದು ಮಾಡುತ್ತಿವೆ. ಈ ನಡುವೆ ಅರಮನೆಯ ವೈಭವಕ್ಕೆ ಯಾವುದೇ ಧಕ್ಕೆ ಬಾರದಿರಲಿ, ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂಬ ಆಶಯದೊಂದಿಗೆ ಮೈಸೂರಿನ ಜಾಗೃತ ನಾಗರಿಕರು ವಿನೂತನ ರೀತಿಯಲ್ಲಿ ತಮ್ಮ ಅಭಿಮಾನ ಮತ್ತು ಕಾಳಜಿ ವ್ಯಕ್ತಪಡಿಸಿದ್ದಾರೆ. ಅರಮನೆಗೆ ಸಾಂಪ್ರದಾಯಿಕವಾಗಿ ದೃಷ್ಟಿ ನಿವಾರಣೆ ಮಾಡಿ, ಕುಂಬಳಕಾಯಿ ಒಡೆದು ಗಮನ ಸೆಳೆದಿದ್ದಾರೆ.

ಬುಧವಾರ ಮೈಸೂರು ಅರಮನೆಯ ಪ್ರಮುಖ ಪ್ರವೇಶದ್ವಾರಗಳಲ್ಲಿ ಒಂದಾದ ಜಯಮಾರ್ತಾಂಡ ಗೇಟ್ ಮುಂಭಾಗದಲ್ಲಿ ನಾಗರಿಕರ ಪರವಾಗಿ ವಿಶೇಷ ದೃಷ್ಟಿ ನಿವಾರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅರಮನೆಗೆ ಕುಂಬಳಕಾಯಿಯಿಂದ ದೃಷ್ಟಿ ತೆಗೆದು, ಬಳಿಕ ಅದನ್ನು ನೆಲಕ್ಕೆ ಒಡೆದು ಸಾಂಕೇತಿಕವಾಗಿ ಕೆಟ್ಟ ದೃಷ್ಟಿ ನಿವಾರಣೆಯಾಗಲಿ ಎಂದು ಪ್ರಾರ್ಥಿಸಲಾಯಿತು. ನಾಗರಿಕರು ಜಾನಪದ ಶೈಲಿಯಲ್ಲಿ 'ನಾಯಿ ಕಣ್ಣು, ನರಿ ಕಣ್ಣು, ಅವರ ಕಣ್ಣು, ಇವರ ಕಣ್ಣು, ಊರವರ ಕಣ್ಣು ನಾಶವಾಗಲಿ' ಎಂದು ಹಾಡುತ್ತಾ ದೃಷ್ಟಿ ನಿವಾರಣೆ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ನಾಗರಿಕ ಜಯಸಿಂಹ, ಇತ್ತೀಚಿನ ದಿನಗಳಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆಯ ಮೇಲೆ ಹಲವರ ಕಣ್ಣು ಬಿದ್ದಿದೆ. ಅರಮನೆಯನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ಹಾಗೂ ಅದರ ಅಸ್ತಿತ್ವವನ್ನು ಮಸುಕುಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಅರಮನೆ ಎಂದರೆ ಕೇವಲ ಇಟ್ಟಿಗೆ, ಸಿಮೆಂಟ್ನಿಂದ ನಿರ್ಮಿಸಿದ ಕಟ್ಟಡವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನ, ಮೈಸೂರಿನ ಇತಿಹಾಸ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ಈ ಐತಿಹಾಸಿಕ ಸ್ಮಾರಕದ ಗೌರವಕ್ಕೆ ಧಕ್ಕೆ ತರಲು ಯತ್ನಿಸುವವರಿಗೆ ಜಾನಪದ ಸಂಪ್ರದಾಯದ ಮೂಲಕ ಸಾಂಕೇತಿಕ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅರಮನೆಗೆ ಸಂಬಂಧಿಸಿದಂತೆ ಕಾನೂನು, ಆಡಳಿತಾತ್ಮಕ ವಿಚಾರಗಳು ಹಾಗೂ ಹಕ್ಕುಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಾರ್ವಜನಿಕರು ತಮ್ಮ ಭಾವನಾತ್ಮಕ ಸಂಬಂಧವನ್ನು ವಿನೂತನವಾಗಿ ವ್ಯಕ್ತಪಡಿಸಿದ್ದಾರೆ. ಕುಂಬಳಕಾಯಿ ಒಡೆದು ಅರಮನೆಗೆ ದೃಷ್ಟಿ ನಿವಾರಣೆ ಮಾಡಿದ ಈ ಅಪರೂಪದ ಕಾರ್ಯಕ್ರಮ ಇದೀಗ ಗಮನ ಸೆಳೆದಿದ್ದು, ಮೈಸೂರು ಅರಮನೆ ನಾಡಿನ ಅಮೂಲ್ಯ ಐತಿಹಾಸಿಕ ಪರಂಪರೆ ಎಂಬ ಸಂದೇಶವನ್ನು ಸಾರಿದೆ.