ತಿರುವನಂತಪುರಂ, ನ.05 (DaijiworldNews/TA): ಕೇರಳದ ವರ್ಕಲಾದಲ್ಲಿ ಒಣ ಮೀನು ಸೇವಿಸಿ ಗಂಭೀರ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ವರ್ಕಲಾ ನಿವಾಸಿ 40 ವರ್ಷದ ಸುಧೀರ್ ಎಂದು ಗುರುತಿಸಲಾಗಿದೆ. ಕಲುಷಿತ ಅಥವಾ ಕೊಳೆತ ಮೀನು ಸೇವನೆಯಿಂದ ಸುಮಾರು 27 ಮಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸುಧೀರ್ ಅವರು ಒಣ ಮೀನು ಸೇವಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದರು. ಅಕ್ಟೋಬರ್ 30ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸುಧೀರ್ ಹೊರತುಪಡಿಸಿ ಸುಮಾರು 27 ಮಂದಿ ಇದೇ ಒಣ ಮೀನು ಸೇವಿಸಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಈ ಪೈಕಿ ಚಿಲಕ್ಕೂರು ನಿವಾಸಿ 17 ವರ್ಷದ ಹಾಶಿಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ಪಾರಿಪಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳು ಮೀನಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ವರ್ಕಲಾ ಸಮೀಪದ ವೆಟ್ಟೂರಿನಲ್ಲಿ ಮಾರಾಟ ಮಾಡಲಾದ ಒಣ ಮೀನು ಸೇವಿಸಿದವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೆಟ್ಟೂರಿನಲ್ಲಿ ಒಣ ಮೀನಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮೀನಿನಲ್ಲಿ ವಿಷಕಾರಿ ಅಂಶಗಳಿದ್ದವೇ ಅಥವಾ ಸಂಗ್ರಹಣೆ ಹಾಗೂ ಸಂಸ್ಕರಣೆಯಲ್ಲಿನ ಲೋಪದಿಂದ ಸಮಸ್ಯೆ ಉಂಟಾಗಿದೆಯೇ ಎಂಬುದು ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಒಣ ಮೀನು ಸೇವನೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಹಾಗೂ ಹಲವರು ಅಸ್ವಸ್ಥಗೊಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.