ಜೈಪುರ, ನ.05 (DaijiworldNews/TA): ರಾಜಸ್ಥಾನದ ನಾಗೌರ್ ನಗರದಲ್ಲಿ ಭಾರೀ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಪೊಟ್ಯಾಸಿಯಮ್ ನೈಟ್ರೇಟ್ ಸಂಗ್ರಹಿಸಿಟ್ಟಿದ್ದ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಫೋಟ ಸಂಭವಿಸಿದೆ. ಘಟನೆಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗೋಡೌನ್ನಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗೋಡೌನ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ಭಾರೀ ಶಬ್ದ ಕೇಳುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಾಗೌರ್ ಕೊತ್ವಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದು, ಪೊಲೀಸರು ಹಾಗೂ ರಕ್ಷಣಾ ತಂಡಗಳು ಗೋಡೌನ್ನಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಗೋಡೌನ್ನಲ್ಲಿ ಹಲವು ಕಾರ್ಮಿಕರು ಇದ್ದಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ ಗೋಡೌನ್ನಲ್ಲಿ ಒಟ್ಟು ಎಷ್ಟು ಮಂದಿ ಇದ್ದರು, ಎಷ್ಟು ಜನರು ಸುರಕ್ಷಿತವಾಗಿ ಹೊರಬಂದಿದ್ದಾರೆ ಮತ್ತು ಇನ್ನೂ ಯಾರಾದರೂ ಒಳಗೆ ಸಿಲುಕಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಸ್ಫೋಟ ಸಂಭವಿಸಿದ ಗೋಡೌನ್ನಲ್ಲಿ ಪೊಟ್ಯಾಸಿಯಮ್ ನೈಟ್ರೇಟ್ ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಇಲ್ಲಿ ಪಟಾಕಿ ತಯಾರಿಕೆಗೆ ಪರವಾನಗಿ ಇತ್ತು ಎಂಬ ಪ್ರಾಥಮಿಕ ಮಾಹಿತಿಯೂ ಲಭ್ಯವಾಗಿದೆ. ಅಲ್ಲದೆ, ಪೊಟ್ಯಾಸಿಯಮ್ ನೈಟ್ರೇಟ್ ಬಳಸಿ ಗನ್ಪೌಡರ್ (ಬೆರುಮದ್ದು) ತಯಾರಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳ ಪರಿಶೀಲನೆ ಹಾಗೂ ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.