ಬೆಂಗಳೂರು, ನ.05 (DaijiworldNews/TA): ರಾಜ್ಯದ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸೂಕ್ತ ಆದ್ಯತೆ ನೀಡಬೇಕು. ಸ್ಥಳೀಯ ಪ್ರತಿಭೆಗಳಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಾಸಗಿ ಕಂಪನಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ತಾರತಮ್ಯವಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಐಟಿ ಮತ್ತು ಖಾಸಗಿ ಕಂಪನಿಗಳ ಜವಾಬ್ದಾರಿಯನ್ನು ಅವರು ಒತ್ತಿಹೇಳಿದ್ದಾರೆ.

ಕನ್ನಡಿಗರಿಗೆ ಸಿಗಬೇಕಾದ ನ್ಯಾಯಯುತ ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಮತ್ತೆ ಒತ್ತಾಯಿಸುತ್ತೇನೆ. ಕನ್ನಡ ಭಾಷೆ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸರ್ಕಾರ ಕನ್ನಡಿಗರ ಬೆಂಬಲಕ್ಕೆ ನಿಲ್ಲಲಿದೆ. ಆದರೆ ಕನ್ನಡದ ಹೆಸರಿನಲ್ಲಿ ಯಾರೂ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದು, ಬೆದರಿಕೆ ಹಾಕುವುದು ಅಥವಾ ನೈತಿಕ ಪೊಲೀಸ್ಗಿರಿ ನಡೆಸುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೌಶಲ್ಯ ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಅದೇ ರೀತಿ ಐಟಿ ಹಾಗೂ ಖಾಸಗಿ ಕಂಪನಿಗಳಿಗೂ ಸಾಮಾಜಿಕ ಜವಾಬ್ದಾರಿ ಇದೆ. ರಾಜ್ಯದಲ್ಲಿ ಸಾಕಷ್ಟು ಪ್ರತಿಭಾವಂತ ಕನ್ನಡಿಗರಿದ್ದು, ಅವರಿಗೆ ಅರ್ಹವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಸ್ವಾರ್ಥ ಹಿತಾಸಕ್ತಿಗಳಿಗಾಗಿ ಕನ್ನಡದ ವಿಚಾರವನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಐಟಿ-ಬಿಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸುವ ಕರ್ನಾಟಕ ರಕ್ಷಣಾ ವೇದಿಕೆಯ ಅಭಿಯಾನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಲ್ಲಿ ಕರವೇ ಕಾರ್ಯಕರ್ತರು 300ಕ್ಕೂ ಹೆಚ್ಚು ಕಂಪನಿಗಳಿಗೆ ಭೇಟಿ ನೀಡಿ, ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹ ಪತ್ರ ಸಲ್ಲಿಸಿದ್ದಾರೆ. ನವೆಂಬರ್ 30ರವರೆಗೆ ಈ ಅಭಿಯಾನ ಮುಂದುವರಿಯಲಿದೆ. ಅಭಿಯಾನದ ಅವಧಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲು ಕರವೇ ನಿರ್ಧರಿಸಿದೆ. ಯಾವ ಕಂಪನಿಯಲ್ಲಿ ಎಷ್ಟು ಮಂದಿ ಕನ್ನಡಿಗರು ಉದ್ಯೋಗದಲ್ಲಿದ್ದಾರೆ, ಸ್ಥಳೀಯರಿಗೆ ಎಷ್ಟು ಅವಕಾಶಗಳನ್ನು ನೀಡಲಾಗಿದೆ ಎಂಬ ಅಂಕಿ-ಅಂಶಗಳನ್ನು ವರದಿ ಒಳಗೊಂಡಿರಲಿದೆ. ಒಟ್ಟಿನಲ್ಲಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸರ್ಕಾರದ ನಿಲುವು ಮತ್ತು ಕರವೇ ಅಭಿಯಾನ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿದೆ.