ನವದೆಹಲಿ, ನ.05 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದಿಯಲ್ಲಿ ನಿಂತು ಗದ್ದಲ ಎಬ್ಬಿಸುವ ಬದಲು ಸಂಸತ್ತಿಗೆ ಬಂದು ಮುಖಾಮುಖಿ ಚರ್ಚೆ ನಡೆಸಿ ಎಂದು ರಾಹುಲ್ಗೆ ಶಾ ನೇರ ಸವಾಲು ಹಾಕಿದ್ದಾರೆ.
ಹರಿಯಾಣದ ಕರ್ನಾಲ್ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ರಾಹುಲ್ ಗಾಂಧಿಗೆ ನೇರ ಸವಾಲು ಹಾಕುತ್ತಿದ್ದೇನೆ. ನೀವು ಪ್ರಧಾನಿ ಮೋದಿಯವರ ಜೊತೆ ಚರ್ಚೆಗೆ ಪಂಥಾಹ್ವಾನ ನೀಡುತ್ತಿದ್ದೀರಾ? ನಿಮಗೆ ನಿಜವಾಗಿಯೂ ಚರ್ಚೆ ಬೇಕಿದ್ದರೆ ಪ್ರಧಾನಿ ಮೋದಿಗೆ ಕೇವಲ ಒಂದು ಪತ್ರ ಬರೆಯಿರಿ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧರಿದ್ದೇವೆ. ತಾಕತ್ತಿದ್ದರೆ ಸಂಸತ್ತಿಗೆ ಬಂದು ಚರ್ಚೆ ಮಾಡಿ ಎಂದು ಗುಡುಗಿದರು.