ನವದೆಹಲಿ, ನ.05 (DaijiworldNews/AK): ಬಂಧನ ಮತ್ತು ಕಸ್ಟಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ ಆರಂಭವಾಗುತ್ತದೆ. ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದ ಈ ಅವಧಿ ಆರಂಭವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು ಕಡ್ಡಾಯ ಎಂದು ಹೇಳಿದೆ.

ಸಾಮಾನ್ಯವಾಗಿ ಪೊಲೀಸರು ವಿಚಾರಣೆಗಾಗಿ ಒಬ್ಬ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಬಹುದು ಅಥವಾ ಶೋಧ ಕಾರ್ಯಾಚರಣೆಯ ವೇಳೆ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು. ಆದರೆ ಆ ವ್ಯಕ್ತಿಗೆ ಅಲ್ಲಿಂದ ಸ್ವತಂತ್ರವಾಗಿ ಹೊರಹೋಗಲು ಅವಕಾಶವಿಲ್ಲದಿದ್ದರೆ, ಆತನ ಸ್ವಾತಂತ್ರ್ಯವನ್ನು ನಿರ್ಬಂಧಿಸಿದಂತಾಗುತ್ತದೆ.
ಇಂತಹ ಸಂದರ್ಭದಲ್ಲಿ ಅಧಿಕೃತವಾಗಿ ಬಂಧನದ ದಾಖಲೆ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ 24 ಗಂಟೆಗಳ ಗಡುವನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬಂಧನ ಮತ್ತು ಕಸ್ಟಡಿ ನಡುವೆ ಕೃತಕ ವ್ಯತ್ಯಾಸ ಸೃಷ್ಟಿಸಿ ಕಾನೂನಿನ ನಿಯಮಗಳನ್ನು ತಪ್ಪಿಸುವಂತಿಲ್ಲ ಎಂದಿದೆ.
ಪುರಾದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. 2025ರ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2 ಗಂಟೆಗೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಮರುದಿನ ಅಂದರೆ ಸೆಪ್ಟೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ಮಾತ್ರ ಅಧಿಕೃತವಾಗಿ ಬಂಧನ ದಾಖಲಿಸಲಾಗಿತ್ತು.
ಈ ಮೂಲಕ ಸುಮಾರು 18 ಗಂಟೆಗಳ ಕಾಲ ಅವರನ್ನು ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆ ಇಲ್ಲದೆ ವಶದಲ್ಲಿರಿಸಲಾಗಿತ್ತು. ಸೆಪ್ಟೆಂಬರ್ 29ರ ಮಧ್ಯಾಹ್ನ 2 ಗಂಟೆಯಿಂದಲೇ 24 ಗಂಟೆಗಳ ಅವಧಿ ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಈ ಅವಧಿಯಲ್ಲಿ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿರುವುದು ಸಂವಿಧಾನದ 22(2)ನೇ ವಿಧಿಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ನಾಲ್ವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು.