ನವದೆಹಲಿ, ನ.05 (DaijiworldNews/TA): ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಹಬ್ಬದ ಸಂದರ್ಭದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಸಿಹಿತಿಂಡಿ ಹಾಗೂ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ ದೆಹಲಿ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದುಬಾರಿ ಬೆಲೆಯ ಐಫೋನ್ 16 ಸ್ಮಾರ್ಟ್ಫೋನ್ಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಗಮನ ಸೆಳೆದಿದೆ. ಉದ್ಯೋಗಿಗಳಿಗೆ ಕಂಪನಿಯಿಂದ ಸಿಕ್ಕ ಈ ವಿಶೇಷ ದೀಪಾವಳಿ ಉಡುಗೊರೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'Financersaab' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 'ಈ ವಿಡಿಯೋಗೆ ಯಾವುದೇ ಸ್ಪರ್ಧೆಯಿಲ್ಲ. ನಿಮಗೆ ದೀಪಾವಳಿಗೆ ಏನು ಸಿಕ್ಕಿತು?' ಎಂಬ ಅಡಿಬರಹದೊಂದಿಗೆ ಕ್ಲಿಪ್ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ದೆಹಲಿ ಮೂಲದ ಕಂಪನಿಯ ದೀಪಾವಳಿ ಸಂಭ್ರಮದ ದೃಶ್ಯಗಳಿವೆ. ಉದ್ಯೋಗಿಗಳ ಡೆಸ್ಕ್ಗಳ ಮೇಲೆ ಐಫೋನ್ 16 ಸ್ಮಾರ್ಟ್ಫೋನ್ಗಳ ಬಾಕ್ಸ್ಗಳನ್ನು ಇಡಲಾಗಿದ್ದು, ದುಬಾರಿ ಉಡುಗೊರೆ ಕಂಡು ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ದೀಪಾವಳಿಗೆ ಸಿಹಿತಿಂಡಿ ಅಥವಾ ಬೋನಸ್ ನಿರೀಕ್ಷಿಸುವ ಉದ್ಯೋಗಿಗಳಿಗೆ ಇಂತಹ ದುಬಾರಿ ಉಡುಗೊರೆ ಸಿಕ್ಕಿರುವುದು ವಿಶೇಷವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದ್ದು, ಅನೇಕರು ತಮಾಷೆಯ ಹಾಗೂ ಮೆಚ್ಚುಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. 'ಈ ಕಂಪನಿಯಲ್ಲಿ ಕೆಲಸ ಮಾಡುವವರೇ ನಿಜವಾದ ಅದೃಷ್ಟವಂತರು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಕಂಪನಿಯಲ್ಲಿ ಹುದ್ದೆ ಖಾಲಿ ಇದ್ದರೆ ತಿಳಿಸಿ, ನಾನೂ ಕೆಲಸಕ್ಕೆ ಸೇರುತ್ತೇನೆ' ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ತಮ್ಮ ಕಂಪನಿಯ ಪರಿಸ್ಥಿತಿಯನ್ನು ವಿವರಿಸುತ್ತಾ, 'ನಮ್ಮ ಕಂಪನಿಯಲ್ಲಿ ಕನಿಷ್ಠ ಒಂದು ಸ್ವೀಟ್ ಬಾಕ್ಸ್ ಕೊಡುವುದೇ ದೊಡ್ಡ ವಿಷಯ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಉದ್ಯೋಗಿಗಳಿಗೆ ಐಫೋನ್ 16 ಉಡುಗೊರೆಯಾಗಿ ನೀಡಿದ ಕಂಪನಿಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಬಾರಿಯ ದೀಪಾವಳಿಗೆ ಇಂತಹ ಗಿಫ್ಟ್ ಸಿಗಲಿ ಎಂಬ ಆಸೆ ಹಲವರಲ್ಲಿ ಮೂಡಿಸಿದೆ.