ಬೆಂಗಳೂರು, ನ.04 (DaijiworldNews/AA): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸೋರಸ್ ನಿಂದ ಹಣಪಡೆಯುವ ರಾಹುಲ್ ಗಾಂಧಿ, ಭಾರತದ ವಿರೋಧಿಯ ಬಣದಲ್ಲಿ ಗುರುತಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವಿದೇಶದಲ್ಲೂ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಕಾಂಗ್ರೆಸ್ ಪಕ್ಷಕ್ಕೆ ವಿದೇಶದಿಂದ ಹಣ ಹರಿದುಬರುತ್ತಿದ್ದು, ಈ ಹಣದಿಂದಲೇ ಆ ಪಕ್ಷದ ನಾಯಕರು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹಾಗೂ ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ದುಃಖಕರ ಸಂಗತಿ" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪ ಹೊಂದಿರುವ ಅವರಿಗೆ ನಾವೆಲ್ಲರೂ ಸಂಪೂರ್ಣ ಬೆಂಬಲವಾಗಿ ನಿಲ್ಲಬೇಕಾಗಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು" ಎಂದರು.