ತಿರುವನಂತಪುರಂ, ನ.04 (DaijiworldNews/AA): ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ 2 ಕೋಟಿ ಲಂಚದ ಆರೋಪಗಳ ತನಿಖೆ ನಡೆಸುವಂತೆ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಸುಮಾರು 20 ವರ್ಷಗಳ ಹಿಂದೆ ಕೇರಳದ ಸಾರ್ವಜನಿಕ ನಿರ್ಮಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಜ್ಞಾನೇಶ್ ಕುಮಾರ್ ಅವರು ರಸ್ತೆ ಯೋಜನೆ ಬಿಲ್ ಮಂಜೂರು ಮಾಡಲು 2 ಕೋಟಿ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕೊಲ್ಲಂ ಜಿಲ್ಲೆಯ ಗುತ್ತಿಗೆದಾರರಾದ ಸಾಜನ್ ಎಂಬುವವರು ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದಾರೆ. 2 ಕೋಟಿ ರೂ. ಲಂಚಕ್ಕಾಗಿ 17 ಕೋಟಿ ಮೌಲ್ಯದ ಅನುಮೋದಿತ ಬಿಲ್ಗಳನ್ನು ತಡೆಹಿಡಿಯಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಿಲ್ಗಳಿಗೆ ಇಂಜಿನಿಯರ್ಗಳು ಅನುಮೋದನೆ ನೀಡಿದ್ದರೂ ಜ್ಞಾನೇಶ್ ಕುಮಾರ್ ಚೆಕ್ಗಳನ್ನು ತಡೆಹಿಡಿದಿದ್ದರು. ಲಂಚ ನೀಡದ ಹೊರತು ಚೆಕ್ಗಳನ್ನ ಬಿಡುಗಡೆ ಮಾಡಲು ಜ್ಞಾನೇಶ್ ಕುಮಾರ್ ನಿರಾಕರಿಸುತ್ತಿದ್ದಾರೆ ಎಂದು ಮಲೇಷ್ಯಾ ಮೂಲದ ಕಂಪನಿಯ ಯೋಜನಾ ಇಂಜಿನಿಯರ್ 'ಲೀ ಸೀ ಬೀನ್' ನಮಗೆ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸಲು ತಾನು ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಸಾಜನ್ ಪ್ರಸ್ತಾಪಿಸಿದರೂ, ಕಂಪನಿಯ ಅಧಿಕಾರಿಗಳು ಲಂಚ ನೀಡಲು ನಿರಾಕರಿಸಿದರು. ಕೊನೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಮತ್ತೊಂದು ಯೋಜನೆಯಿಂದ 'ಲೀ ಸೀ ಬೀನ್' ಹಣದ ವ್ಯವಸ್ಥೆ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.