ಬೆಂಗಳೂರು, ನ.04 (DaijiworldNews/TA): ಚುನಾವಣೆಯಲ್ಲಿ ಸೋತ ರಾಜಕೀಯ ಅಭ್ಯರ್ಥಿಗಳಿಗೆ ಸರ್ಕಾರದ ಪ್ರಮುಖ ಹುದ್ದೆಗಳನ್ನು ನೀಡುವ ಅಥವಾ ಹಿಂಬಾಗಿಲಿನಿಂದ ನೇಮಕ ಮಾಡುವ ಕ್ರಮ ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅನಧಿಕೃತ ಜಮೀನು ಸಕ್ರಮಗೊಳಿಸುವ ಸಮಿತಿಯ ಅಧ್ಯಕ್ಷರ ಹುದ್ದೆಗೆ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದ ಕ್ರಮಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ರೂಲ್ 108-EE(1)(a) ಅಡಿಯಲ್ಲಿ ಅನಧಿಕೃತವಾಗಿ ಭೂಮಿ ವಶಪಡಿಸಿಕೊಂಡಿರುವ ಪ್ರಕರಣಗಳ ಅರ್ಜಿಗಳನ್ನು ಪರಿಶೀಲಿಸಲು ರಚಿಸಲಾಗುವ ಹೆಚ್ಚುವರಿ ಸಮಿತಿಯ ಅಧ್ಯಕ್ಷರ ನೇಮಕಾತಿಗೆ ಕಟ್ಟುನಿಟ್ಟಿನ ಅರ್ಹತಾ ಮಾನದಂಡಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ನ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು 2026ರಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94-A(2-A) ಅಡಿಯಲ್ಲಿ ಹೆಚ್ಚುವರಿ ಸಮಿತಿ ರಚಿಸಿ ರಾಜ್ಯ ಸರ್ಕಾರ 2023ರ ಡಿಸೆಂಬರ್ 4 ಮತ್ತು ಡಿಸೆಂಬರ್ 26ರಂದು ಹೊರಡಿಸಿದ್ದ ಅಧಿಸೂಚನೆಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
2023ರ ನವೆಂಬರ್ 2ರಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಸೆಕ್ಷನ್ 94(A)(1) ಅಡಿಯಲ್ಲಿ 12,313 ಬಾಕಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಬಳಿಕ ರಾಜ್ಯ ಸರ್ಕಾರ ಹೆಚ್ಚುವರಿ ಸಮಿತಿ ರಚಿಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಅದರ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಂದಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದರು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇದೀಗ ಮಹತ್ವದ ಆದೇಶ ಹೊರಡಿಸಿದೆ.
ಹೆಚ್ಚುವರಿ ಸಮಿತಿಯ ಅಧ್ಯಕ್ಷರ ನೇಮಕಾತಿಯಲ್ಲಿ ರಾಜಕೀಯ ಹಿನ್ನೆಲೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಕಂದಾಯ ಇಲಾಖೆಯ ಕಾರ್ಯವೈಖರಿಯ ಅನುಭವ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ನಡವಳಿಕೆಯನ್ನು ಪ್ರಮುಖ ಅರ್ಹತೆಗಳನ್ನಾಗಿ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯನ್ನು ಇಂತಹ ಪ್ರಮುಖ ಕಂದಾಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದ ಕ್ರಮದ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣೆಯಲ್ಲಿ ಜನಾದೇಶ ಪಡೆಯದ ರಾಜಕೀಯ ಅಭ್ಯರ್ಥಿಗಳಿಗೆ ಇಂತಹ ಪ್ರಮುಖ ಸರ್ಕಾರಿ ಹುದ್ದೆಗಳನ್ನು ಹಿಂಬಾಗಿಲಿನಿಂದ ಕಲ್ಪಿಸುವುದು ಸರಿಯಲ್ಲ ಎಂಬ ನ್ಯಾಯಾಲಯದ ಅಭಿಪ್ರಾಯ ಇದೀಗ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.