ಪಾಟ್ನಾ, ನ.04 (DaijiworldNews/TA): ಮಕ್ಕಳು ಆಟವಾಡುತ್ತಾ ಬಾಲ್ಯ ಕಳೆಯುವ ವಯಸ್ಸಿನಲ್ಲಿ ಪ್ರಿಯಾ ರಾಣಿ ತನ್ನ ಶಿಕ್ಷಣ ಮತ್ತು ಕನಸುಗಳಿಗಾಗಿ ಹೋರಾಡಬೇಕಾಯಿತು. ಓದುವುದಕ್ಕೆ ಗ್ರಾಮಸ್ಥರ ವಿರೋಧ ಎದುರಾದರೂ ಎದೆಗುಂದದೆ ಮುನ್ನಡೆದ ಅವರು, ಇಂದು ಐಎಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾ ರಾಣಿ ಅವರ ಸಾಧನೆಯ ಪಯಣ ಅನೇಕರಿಗೆ ಸ್ಫೂರ್ತಿಯಾಗಿದೆ.

ಬಿಹಾರದ ಫುಲ್ವಾರಿ ಶರೀಫ್ನ ಕುರ್ಕುರಿ ಗ್ರಾಮದವರಾದ ಪ್ರಿಯಾ ರಾಣಿ, ರೈತ ಅಭಯ್ ಕುಮಾರ್ ಅವರ ಪುತ್ರಿ. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಗ್ರಾಮದಲ್ಲಿ ಶಿಕ್ಷಣ ಮುಂದುವರಿಸುವುದು ಸುಲಭವಾಗಿರಲಿಲ್ಲ. ಗ್ರಾಮಸ್ಥರಿಂದ ವಿರೋಧ ವ್ಯಕ್ತವಾದರೂ, ಅವರ ಅಜ್ಜ ಸುರೇಂದ್ರ ಪ್ರಸಾದ್ ಶರ್ಮಾ ಮೊಮ್ಮಗಳ ಸಾಮರ್ಥ್ಯ ಮತ್ತು ಕನಸನ್ನು ಗುರುತಿಸಿದ್ದರು.
ಮೊಮ್ಮಗಳ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶದಿಂದ ಅಜ್ಜ ಹಾಗೂ ತಂದೆ ಪ್ರಿಯಾ ಅವರನ್ನು ಪಾಟ್ನಾಕ್ಕೆ ಸ್ಥಳಾಂತರಿಸಿದರು. ಅಲ್ಲಿ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಬಳಿಕ ಸೇಂಟ್ ಮೈಕೆಲ್ಸ್ ಶಾಲೆಯಲ್ಲಿ ಪಿಯುಸಿ ಪೂರ್ಣಗೊಳಿಸಿದರು.
2018ರಲ್ಲಿ ಬಿಐಟಿ ಮೆಸ್ರಾದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದ ಪ್ರಿಯಾ ಅವರಿಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಉತ್ತಮ ಸಂಬಳದ ಉದ್ಯೋಗ ದೊರೆಯಿತು. ಆದರೆ ನಾಗರಿಕ ಸೇವೆಗೆ ಸೇರುವ ಕನಸು ಅವರಲ್ಲಿತ್ತು. ಹೀಗಾಗಿ ಕೈಯಲ್ಲಿದ್ದ ಉದ್ಯೋಗವನ್ನು ತೊರೆದು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು. ಆರಂಭದಲ್ಲಿ ಅವರ ನಿರ್ಧಾರಕ್ಕೆ ಕುಟುಂಬದವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು. ಆದರೂ ತಮ್ಮ ಗುರಿಯ ಮೇಲಿನ ನಂಬಿಕೆಯಿಂದ ಸಿದ್ಧತೆ ಮುಂದುವರಿಸಿದರು.
2021ರಲ್ಲಿ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 284ನೇ ರ್ಯಾಂಕ್ ಗಳಿಸಿದ ಪ್ರಿಯಾ ರಾಣಿ ಭಾರತೀಯ ರಕ್ಷಣಾ ಸೇವೆಗೆ ಆಯ್ಕೆಯಾದರು. ಆದರೆ ಅವರ ಗುರಿ ಐಎಎಸ್ ಅಧಿಕಾರಿಯಾಗುವುದಾಗಿತ್ತು. ತಂದೆಯ ಬೆಂಬಲ ಮತ್ತು ನಿರಂತರ ಪರಿಶ್ರಮದೊಂದಿಗೆ ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸಿದ ಅವರು, 2023ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ 69ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು.
ತಮ್ಮ ಯಶಸ್ಸಿಗೆ ಶಿಸ್ತು ಮತ್ತು ಕಠಿಣ ಪರಿಶ್ರಮವೇ ಪ್ರಮುಖ ಕಾರಣ ಎಂದು ಪ್ರಿಯಾ ರಾಣಿ ಹೇಳಿದ್ದಾರೆ. ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಅಧ್ಯಯನ ಆರಂಭಿಸುತ್ತಿದ್ದ ಅವರು, ವಿಶೇಷವಾಗಿ ಅರ್ಥಶಾಸ್ತ್ರ ವಿಷಯದ ಮೇಲೆ ಹೆಚ್ಚಿನ ಗಮನ ಹರಿಸಿದ್ದರು. ಎನ್ಸಿಇಆರ್ಟಿ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಯುಪಿಎಸ್ಸಿ ತಯಾರಿಯ ಪ್ರಮುಖ ಆಧಾರವಾಗಿಸಿಕೊಂಡಿದ್ದರು.
ಒಂದು ಕಾಲದಲ್ಲಿ ಶಿಕ್ಷಣ ಪಡೆಯುವುದಕ್ಕೂ ಹಳ್ಳಿಯ ವಿರೋಧ ಎದುರಿಸಿದ್ದ ಪ್ರಿಯಾ ರಾಣಿ, ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬದ ಬೆಂಬಲ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಅಡೆತಡೆಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಅವರ ಜೀವನ ಪಯಣ ಸಾಕ್ಷಿಯಾಗಿದೆ.