ಬೆಂಗಳೂರು, ನ.03 (DaijiworldNews/AK):ಎಸ್ಐಆರ್ ವಿಷಯದಲ್ಲಿ ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ವಿಧಾನಪರಿಷತ್ ಚುನಾವಣೆಯು ಮತಪತ್ರದ ಆಧಾರದಲ್ಲೇ ನಡೆದಿದೆ. ಆದರೂ ಕಾಂಗ್ರೆಸ್ ಪಕ್ಷ ಸೋತಿದೆ ಎಂದು ಅವರು ಗಮನ ಸೆಳೆದರು. ಜನತೆ ಕಾಂಗ್ರೆಸ್ಸನ್ನು ಇದೀಗ ದ್ವೇಷಿಸುವಂತಾಗಿದೆ ಎಂದು ತಿಳಿಸಿದರು.
ಮತದಾರರ ಸ್ಥಳಾಂತರ, ಸಾವು, ಹೊರದೇಶದಿಂದ ಅಕ್ರಮ ನುಸುಳುವಿಕೆಯ ಹಿನ್ನೆಲೆಯಲ್ಲಿ ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವುದು ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ವಿರುದ್ಧ ಮಾತನಾಡುತ್ತಿತ್ತು ಎಂದು ವಿವರಿಸಿದರು. ಕಳೆದ 20 ವರ್ಷಗಳಿಂದ ಎಸ್ಐಆರ್ ನಡೆದಿರಲಿಲ್ಲ. ಹೀಗೆ ಸುದೀರ್ಘ ಕಾಲ ನಡೆಯದ ಎಸ್ಐಆರ್ ವಿಚಾರದಲ್ಲಿ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸತ್ತವರ ಹೆಸರು ರದ್ದು ಮಾಡುವುದು, ಅಕ್ರಮ ನುಸುಳುಕೋರರ ಹೆಸರು ರದ್ದತಿ, ಎರಡು ಕಡೆ ಮತದಾನದ ಸಮಸ್ಯೆ ನಿವಾರಣೆ ಮಾಡಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಸ್ಐಆರ್ ಅನಿವಾರ್ಯ ಎಂದು ಅವರು ನುಡಿದರು. ಸುಮಾರು 13 ಕೋಟಿ ಜನರ ಹೆಸರು ರದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಇದರ ಪೈಕಿ 6 ಕೋಟಿ 3 ಲಕ್ಷದಷ್ಟು ಮತಗಳು ಊರಿನ ಬದಲಾವಣೆ ಕಾರಣಕ್ಕಾಗಿ ರದ್ದಾಗಿವೆ. ಅವರಿಗೆ ಎರಡು ಕಡೆ ಮತ ಇರುವುದು ಸಾಧ್ಯವಿಲ್ಲ ಎಂದು ತಿಳಿಸಿದರು. ಸುಮಾರು 3 ಕೋಟಿ ಜನರು ಮೃತಪಟ್ಟಿದ್ದಾರೆ. ಸುಮಾರು 1 ಕೋಟಿ ಜನರು ಎರಡು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎಂದು ತಿಳಿಸಿದರು.
ಎರಡು ಕಡೆ ಇದ್ದವರ ಹೆಸರು ರದ್ದು ಮಾಡಿದ್ದು ಕಾಂಗ್ರೆಸ್, ಟಿಎಂಸಿಯಂಥ ಪಕ್ಷಗಳಿಗೆ ಸಮಸ್ಯೆ ತಂದೊಡ್ಡಿದೆ ಎಂದು ಟೀಕಿಸಿದರು. ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುದು ತಪ್ಪೇ ಎಂದು ಅವರು ಪ್ರಶ್ನಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಒಬ್ಬರೇ ಎರಡು ಮತ ಹೊಂದಿದ್ದವರ ಒಂದು ಕಡೆಯ ಹೆಸರು ರದ್ದು ಮಾಡಲಾಗಿದೆ ಎಂದು ಅವರು ವಿವರಿಸಿದರು. ಕರ್ನಾಟಕದಲ್ಲೂ 7 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇತ್ತು ಎಂದು ಗಮನ ಸೆಳೆದರು.
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯ
ಪ್ರಜಾಪ್ರಭುತ್ವದ ಸಶಕ್ತೀಕರಣಕ್ಕೆ ಎಸ್ಐಆರ್ ಅನಿವಾರ್ಯತೆ ಇತ್ತು ಎಂದ ಅವರು, ಅರ್ಹತೆ ಇದ್ದ ಯಾರ ಹೆಸರನ್ನೂ ಈ 13 ಕೋಟಿಯಲ್ಲಿ ರದ್ದು ಮಾಡಿಲ್ಲ ಎಂದು ಹೇಳಿದರು. ಬೋಗಸ್ ಮತ ಪಡೆಯುತ್ತಿದ್ದ ಹಾಗೂ ಮೃತ ಮತದಾರರ ಹೆಸರಿನಲ್ಲಿ ಬೇರೊಬ್ಬರಿಂದ ಮತದಾನ ಮಾಡಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಷ್ಕರಣೆಯಿಂದ ಆತಂಕ ಉಂಟಾಗಿದೆ ಎಂದು ವಿಶ್ಲೇಷಿಸಿದರು. ಹತ್ತಾರು ವರ್ಷಗಳಿಂದ ನಕಲಿ ಮತದಾನ ನಡೆದಿತ್ತು. ಮೋದಿಯವರ ಸರಕಾರ ಇದಕ್ಕೆ ಅಂಕುಶ ಹಾಕಿದ್ದರಿಂದ ಕಾಂಗ್ರೆಸ್ಸಿಗರಿಗೆ ಆತಂಕ ಉಂಟಾಗಿದೆ ಎಂದರು.