ಮುಂಬೈ, ನ.03 (DaijiworldNews/TA): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಕಂಪನಿಯ ಷೇರುಗಳು ದಾಖಲಿಸಿದ ಭರ್ಜರಿ ಏರಿಕೆಯಿಂದಾಗಿ ಅವರ ಒಟ್ಟು ಆಸ್ತಿ ಮೌಲ್ಯ 99.7 ಬಿಲಿಯನ್ ಡಾಲರ್ಗೆ ತಲುಪಿದೆ. ಈ ಮೂಲಕ ಟಿಕ್ಟಾಕ್ ಮಾತೃಸಂಸ್ಥೆ ಬೈಟ್ಡ್ಯಾನ್ಸ್ನ ಸಂಸ್ಥಾಪಕ ಝಾಂಗ್ ಯಿಮಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ, ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯದಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ರಿಲಯನ್ಸ್ನ ಟೆಲಿಕಾಂ, ರಿಟೇಲ್ ಮತ್ತು ಇಂಧನ ವಲಯಗಳ ವ್ಯವಹಾರಗಳ ಉತ್ತಮ ಪ್ರದರ್ಶನ ಕಂಪನಿಯ ಷೇರು ಮೌಲ್ಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
99.7 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 21ನೇ ಸ್ಥಾನಕ್ಕೇರಿದ್ದಾರೆ. ಬೈಟ್ಡ್ಯಾನ್ಸ್ ಸಂಸ್ಥಾಪಕ ಝಾಂಗ್ ಯಿಮಿಂಗ್ 69.3 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 26ನೇ ಸ್ಥಾನದಲ್ಲಿದ್ದಾರೆ. ಭಾರತದ ಉದ್ಯಮಿ ಗೌತಮ್ ಅದಾನಿ 63.8 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ 31ನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಪಟ್ಟಿಯ ವಿಶ್ವದ ಟಾಪ್ 10 ಶ್ರೀಮಂತರು :
1. ಇಲಾನ್ ಮಸ್ಕ್ – 839 ಬಿಲಿಯನ್ ಡಾಲರ್
2. ಲ್ಯಾರಿ ಪೇಜ್ – 257 ಬಿಲಿಯನ್ ಡಾಲರ್
3. ಸೆರ್ಗೇ ಬ್ರಿನ್ – 237 ಬಿಲಿಯನ್ ಡಾಲರ್
4. ಜೆಫ್ ಬೆಜೋಸ್ – 224 ಬಿಲಿಯನ್ ಡಾಲರ್
5. ಮಾರ್ಕ್ ಝುಕರ್ಬರ್ಗ್ – 222 ಬಿಲಿಯನ್ ಡಾಲರ್
6. ಲ್ಯಾರಿ ಎಲಿಸನ್ – 190 ಬಿಲಿಯನ್ ಡಾಲರ್
7. ಬರ್ನಾರ್ಡ್ ಆರ್ನಾಲ್ಟ್ – 171 ಬಿಲಿಯನ್ ಡಾಲರ್
8. ಜೆನ್ಸೆನ್ ಹುವಾಂಗ್ – 154 ಬಿಲಿಯನ್ ಡಾಲರ್
9. ವಾರೆನ್ ಬಫೆಟ್ – 149 ಬಿಲಿಯನ್ ಡಾಲರ್
10. ಅಮಾನ್ಸಿಯೋ ಒರ್ಟೆಗಾ – 148 ಬಿಲಿಯನ್ ಡಾಲರ್
ಈ ಪಟ್ಟಿಯಲ್ಲಿ ಎಂಟು ಮಂದಿ ಅಮೆರಿಕನ್ನರಿದ್ದು, ಫ್ರಾನ್ಸ್ನ ಬರ್ನಾರ್ಡ್ ಆರ್ನಾಲ್ಟ್ ಮತ್ತು ಸ್ಪೇನ್ನ ಅಮಾನ್ಸಿಯೋ ಒರ್ಟೆಗಾ ಅವರು ಅಮೆರಿಕೇತರ ಶ್ರೀಮಂತರಾಗಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪ್ರಮುಖ ಶ್ರೀಮಂತರು :
- ಮುಕೇಶ್ ಅಂಬಾನಿ – 99.7 ಬಿಲಿಯನ್ ಡಾಲರ್ (ಜಾಗತಿಕ 21ನೇ ಸ್ಥಾನ)
- ಗೌತಮ್ ಅದಾನಿ – 63.8 ಬಿಲಿಯನ್ ಡಾಲರ್ (31ನೇ ಸ್ಥಾನ)
- ಸಾವಿತ್ರಿ ಜಿಂದಲ್ – 39.1 ಬಿಲಿಯನ್ ಡಾಲರ್ (51ನೇ ಸ್ಥಾನ)
- ಲಕ್ಷ್ಮಿ ಮಿತ್ತಲ್ – 31 ಬಿಲಿಯನ್ ಡಾಲರ್ (70ನೇ ಸ್ಥಾನ)
- ಶಿವ್ ನಾಡರ್ – 30.9 ಬಿಲಿಯನ್ ಡಾಲರ್ (71ನೇ ಸ್ಥಾನ)
ಜಾಗತಿಕ ಟಾಪ್-100 ಶ್ರೀಮಂತರ ಪಟ್ಟಿಯಲ್ಲಿ ಒಟ್ಟು ಏಳು ಭಾರತೀಯರು ಸ್ಥಾನ ಪಡೆದಿದ್ದಾರೆ. ಸೈರಸ್ ಪೂನಾವಾಲಾ ಮತ್ತು ದಿಲೀಪ್ ಸಾಂಘವಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಇನ್ನು ಕುಮಾರ್ ಮಂಗಳಂ ಬಿರ್ಲಾ ಹಾಗೂ ರಾಧಾಕಿಶನ್ ದಮಾನಿ ಅವರು 100ರಿಂದ 200ನೇ ಸ್ಥಾನದ ನಡುವೆ ಇದ್ದಾರೆ.