ಬೆಳಗಾವಿ, ನ.03 (DaijiworldNews/TA): ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ನಡೆಸುತ್ತಿರುವ ಹೋರಾಟ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಮುಧೋಳ-ಚಿಕ್ಕೋಡಿ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ರೈತರ ಆಕ್ರೋಶದ ಘೋಷಣೆಗಳ ನಡುವೆಯೇ ಮಾನವೀಯತೆ ಮತ್ತು ಒಗ್ಗಟ್ಟಿನ ಅಪರೂಪದ ಚಿತ್ರಣವೂ ಕಂಡುಬರುತ್ತಿದೆ.

ಸಾವಿರಾರು ರೈತರು ಹಗಲಿರುಳು ಧರಣಿ ನಡೆಸುತ್ತಿದ್ದು, ಪ್ರತಿಭಟನಾಕಾರರಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಬೃಹತ್ ಅನ್ನದಾಸೋಹಕ್ಕೆ ಕೈಜೋಡಿಸಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ಸಿಗಬೇಕೆಂದು ಹೆದ್ದಾರಿ ತಡೆದು ಕುಳಿತಿರುವ ರೈತರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಸ್ವಯಂಪ್ರೇರಿತರಾಗಿ ಅಕ್ಕಿ, ಬೇಳೆ, ತರಕಾರಿ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳನ್ನು ತಂದುಕೊಡುತ್ತಿದ್ದಾರೆ.
ದಿನವೊಂದಕ್ಕೆ ಸುಮಾರು 50ರಿಂದ 70 ಕ್ವಿಂಟಾಲ್ ಅಕ್ಕಿಯನ್ನು ಬಳಸಿ ಅಡುಗೆ ತಯಾರಿಸಲಾಗುತ್ತಿದೆ ಎನ್ನಲಾಗಿದ್ದು, ಸಾವಿರಾರು ಪ್ರತಿಭಟನಾಕಾರರಿಗೆ ಊಟ ಬಡಿಸಲಾಗುತ್ತಿದೆ. ಯಾವುದೇ ದೊಡ್ಡ ಸಂಘಟನೆಯ ನೆರವಿಲ್ಲದೆ ರೈತರು ಪರಸ್ಪರ ಸಹಕಾರದಿಂದ ಈ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈ ಅನ್ನದಾಸೋಹದಲ್ಲಿ ರೈತ ಮಹಿಳೆಯರ ಕೊಡುಗೆಯೂ ಮಹತ್ವದ್ದಾಗಿದೆ. ಮನೆಯಲ್ಲೇ ತಯಾರಿಸಿದ ಶೇಂಗಾ ಹೋಳಿಗೆ, ಸಜ್ಜೆ ಹೋಳಿಗೆ, ಚಪಾತಿ, ರೊಟ್ಟಿ, ಲಡ್ಡು, ಅಂಬಲಿ ಹಾಗೂ ಬಾಳೆಹಣ್ಣುಗಳನ್ನು ತಂದು ಪ್ರತಿಭಟನಾಕಾರರಿಗೆ ಉಣಬಡಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಆಹಾರ ಧಾನ್ಯ ಹಾಗೂ ಅಡುಗೆ ಪದಾರ್ಥಗಳನ್ನು ತಂದುಕೊಡುವ ಮೂಲಕ 'ನಾವೆಲ್ಲರೂ ಒಂದೇ' ಎಂಬ ಒಗ್ಗಟ್ಟಿನ ಸಂದೇಶ ಸಾರುತ್ತಿದ್ದಾರೆ.
ಸ್ಥಳೀಯ ರೈತರೊಬ್ಬರು ಪ್ರತಿಭಟನಾ ಸ್ಥಳದ ವಾತಾವರಣವನ್ನು ವಿವರಿಸುತ್ತಾ, "ಮೈಸೂರು ದಸರಾ ಹೇಗಿರುತ್ತದೋ ನಮಗೆ ಗೊತ್ತಿಲ್ಲ. ಆದರೆ ನಮ್ಮ ಧರಣಿ ಸ್ಥಳದಲ್ಲೇ ಅಸಲಿ ದಸರಾ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಯಾರೂ ನಾಯಕರಲ್ಲ, ಯಾರೂ ಸೇವಕರಲ್ಲ. ಎಲ್ಲರೂ ಒಟ್ಟಾಗಿ ಹೋರಾಡುತ್ತಿದ್ದೇವೆ, ಒಟ್ಟಾಗಿ ಊಟ ಮಾಡುತ್ತಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕಬ್ಬಿಗೆ ಸೂಕ್ತ ಬೆಲೆ ಸಿಗಬೇಕೆಂಬ ಬೇಡಿಕೆಯೊಂದಿಗೆ ನಡೆಯುತ್ತಿರುವ ಹೋರಾಟದ ನಡುವೆ ಗುರ್ಲಾಪುರದಲ್ಲಿ ಕಾಣಿಸಿಕೊಂಡಿರುವ ಈ ಒಗ್ಗಟ್ಟು ಮತ್ತು ಸಹಕಾರ ಗಮನ ಸೆಳೆಯುತ್ತಿದೆ. ರೈತರೇ ರೈತರಿಗೆ ಆಸರೆಯಾಗಿ ನಿಂತಿರುವ ಈ ಅನ್ನದಾಸೋಹ ಪ್ರತಿಭಟನೆಯ ಮಾನವೀಯ ಮುಖವನ್ನು ಅನಾವರಣಗೊಳಿಸಿದೆ.