ನವದೆಹಲಿ, ನ.03 (DaijiworldNews/AA): ಪ್ರತಿಭಟನೆ ನಡೆಸಲು ನಿಗದಿಪಡಿಸಿರುವ ಸಾರ್ವಜನಿಕ ಸ್ಥಳವನ್ನು ಯಾವುದೇ ಸಂಘಟನೆ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಯಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವ್ಯಾಪಾರಿಗಳ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠ ನಡೆಸಿತು.
ವಿಚಾರಣೆ ವೇಳೆ, ರೈತರು, ಕಾರ್ಮಿಕರು, ಪತ್ರಕರ್ತರು ಸೇರಿದಂತೆ ಇತರ ಸಂಘಟನೆಗಳಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಹೀಗಾಗಿ ಪ್ರತಿಭಟನೆಗೆ ನಿಗದಿತ ಸ್ಥಳ ಮತ್ತು ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಬೇಕು. ಯಾವುದೇ ಸ್ಥಳವನ್ನು ಶಾಶ್ವತವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ರೈತರು, ಪತ್ರಕರ್ತರು ಮತ್ತು ಇತರರು ಪ್ರತಿಭಟನೆ ನಡೆಸಲು ಎಲ್ಲಿಗೆ ಹೋಗಬೇಕು? ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ ಅದಕ್ಕೆ ನಿಗದಿತ ಸ್ಥಳ ಮತ್ತು ನಿರ್ದಿಷ್ಟ ಅವಧಿ ಇರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.
"ಪ್ರತಿಭಟನೆಗಳಿಂದ ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಕುಸಿದಿದೆ. ಪ್ರತಿಭಟನಾ ಸ್ಥಳದ ಸುತ್ತಮುತ್ತ ಸುಮಾರು 50 ಲಕ್ಷ ಜನರು ವಾಸಿಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿದ್ದು, ಕನ್ನಾಟ್ ಪ್ಲೇಸ್ನಲ್ಲೂ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿವೆ" ಎಂದು ವ್ಯಾಪಾರಿಗಳ ಪರ ಹಿರಿಯ ವಕೀಲ ವಾದ ಮಂಡಿಸಿದ್ದಾರೆ.
"ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಕುಸಿದರೆ ವ್ಯಾಪಾರಿಗಳು ಮತ್ತು ಅವರನ್ನೇ ಅವಲಂಬಿಸಿರುವ ಕಾರ್ಮಿಕರಿಗೆ ಭಾರಿ ನಷ್ಟವಾಗಲಿದೆ. ಹೀಗಾಗಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪ್ರತಿಭಟನೆ ಮತ್ತು ಧರಣಿಗಳಿಗೆ ಅವಕಾಶ ನೀಡಬಾರದು" ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ವ್ಯಾಪಾರಿಗಳ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಸಿಇಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳನ್ನೂ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸುವಂತೆ ಪ್ರತಿಭಟನಾ ಸಂಘಟನೆಗಳ ವಾದವನ್ನು ಆಲಿಸದೆ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸೂಚಿಸಿತು.