ನವದೆಹಲಿ, ನ.03 (DaijiworldNews/AA): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಣಕು ಸಂಸತ್ತಿನಲ್ಲಿ ಪ್ರಧಾನಿಯಾಗಬಹುದು, ಆದರೆ ನೈಜ ಸಂಸತ್ತಿನಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಇತ್ತೀಚಿಗೆ ನಡೆಸಿದ ಸಾಂಕೇತಿಕ ದೋಷರೋಪ ಪ್ರಕ್ರಿಯೆ ಮತ್ತು ನಂತರದ ರ್ಯಾಲಿ ಕುರಿತು ಪ್ರತಿಕ್ರಿಯಿಸಿದ ಶರ್ಮಾ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಕಾಂಗ್ರೆಸ್ ಹಲವು ಬಾರಿ ಪ್ರಯತ್ನಿಸಿದರೂ, ಅವು ಯಶಸ್ವಿಯಾಗಲಿಲ್ಲ ಎಂದರು.
"ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಬಯಸಿದ್ದರು ಮತ್ತು ಅದಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಪ್ರಯತ್ನಗಳು ಫಲ ನೀಡದಿದ್ದಾಗ, ಅವರು ಖರ್ಗೆ ಅವರ ನಿವಾಸದ ಆವರಣದಲ್ಲಿ ಒಂದು 'ಅಣಕು ಸಂಸತ್ತು' ಆಯೋಜಿಸಿದರು. ಅಲ್ಲಿ ಅವರು (ರಾಹುಲ್ ಗಾಂಧಿ) ಪ್ರಧಾನಿಯಾದರು. ವಾಸ್ತವವೇನೆಂದರೆ, ಅಣಕು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ, ಆದರೆ ನಿಜವಾದ ಸಂಸತ್ತಿನಲ್ಲಿ ಮೋದಿ ಜಿ ಪ್ರಧಾನಿಯಾಗಿರುತ್ತಾರೆ" ಎಂದು ಹೇಳಿದರು.