ಕೊಪ್ಪಳ, ನ.03 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಕೊಪ್ಪಳದ ರೈತರೊಬ್ಬರು ವಿಭಿನ್ನ ಹಾದಿ ಹಿಡಿದಿದ್ದಾರೆ. ತಮ್ಮ ಒಂದು ಎಕರೆ ಜಮೀನಿನಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಚೆಂಡು ಹೂವಿನ ಗಿಡಗಳನ್ನು ವಿಶೇಷ ವಿನ್ಯಾಸದಲ್ಲಿ ಬೆಳೆಸಿ, ಮೇಲಿನಿಂದ ನೋಡಿದಾಗ ‘ಮೋದಿ’ ಎಂಬ ಹೆಸರು ಗೋಚರಿಸುವಂತೆ ಮಾಡಿದ್ದಾರೆ. ರೈತನ ಈ ಅಪರೂಪದ ಕೃಷಿ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಕ್ಕಳ ಗ್ರಾಮದ ರೈತ ಬಸವರಾಜ ಜಾಲಿಹಾಳ ಈ ವಿನೂತನ ಪ್ರಯೋಗ ಮಾಡಿದವರು. ತಮ್ಮ ಒಂದು ಎಕರೆ ಜಮೀನಿನಲ್ಲಿ ಚೆಂಡು ಹೂವಿನ ಕೃಷಿ ಕೈಗೊಂಡಿದ್ದ ಅವರು, ಆರಂಭದಲ್ಲೇ ಸಸಿಗಳನ್ನು ನೆಡುವಾಗ ‘ಮೋದಿ’ ಎಂಬ ಅಕ್ಷರಗಳು ಮೂಡುವಂತೆ ಯೋಜನೆ ರೂಪಿಸಿದ್ದರು. ಅದರಂತೆ ಕೆಂಪು ಹಾಗೂ ವಿವಿಧ ತಳಿಯ ಚೆಂಡು ಹೂವಿನ ಗಿಡಗಳನ್ನು ನಿರ್ದಿಷ್ಟ ವಿನ್ಯಾಸದಲ್ಲಿ ಸಾಲುಸಾಲಾಗಿ ನೆಟ್ಟಿದ್ದರು. ಇದೀಗ ಗಿಡಗಳು ಬೆಳೆದು ಹೂವುಗಳು ಸಂಪೂರ್ಣವಾಗಿ ಅರಳಿದ್ದು, ಹಸಿರು ತೋಟದ ಮಧ್ಯೆ ‘ಮೋದಿ’ ಎಂಬ ಹೆಸರು ಸುಂದರವಾಗಿ ಮೂಡಿಬಂದಿದೆ.
ನೆಲದ ಮೇಲಿನಿಂದ ನೋಡಿದಾಗ ಸಾಮಾನ್ಯ ಹೂವಿನ ತೋಟದಂತೆ ಕಾಣುವ ಈ ಕೃಷಿ ವಿನ್ಯಾಸದ ವಿಶೇಷತೆ ಡ್ರೋನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಆಕಾಶದಿಂದ ಸೆರೆಹಿಡಿದ ದೃಶ್ಯಗಳಲ್ಲಿ ಒಂದು ಎಕರೆ ಜಮೀನಿನ ಮಧ್ಯೆ ಚೆಂಡು ಹೂವುಗಳಿಂದ ರೂಪುಗೊಂಡ ‘MODI’ ಎಂಬ ಅಕ್ಷರಗಳು ಗಮನ ಸೆಳೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ಕೃಷಿಯ ಮೂಲಕವೇ ವಿಭಿನ್ನವಾಗಿ ವ್ಯಕ್ತಪಡಿಸಿರುವ ಬಸವರಾಜ ಜಾಲಿಹಾಳ ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಂಪ್ರದಾಯಿಕ ಕೃಷಿಯ ನಡುವೆಯೂ ಸೃಜನಶೀಲತೆಯನ್ನು ಅಳವಡಿಸಿಕೊಂಡಿರುವ ರೈತನ ಈ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.