ವಾರಾಣಸಿ, ನ.02 (DaijiworldNews/AA): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ವಿಚಾರದಲ್ಲಿ ಪ್ರತಿಪಕ್ಷಗಳು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ತಿಳಿಸಿದ್ದಾರೆ.

ಸೋಮವಾರ ವಾರಾಣಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತದಾರರ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವುದು ಎಸ್ಐಆರ್ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ. ಮೃತಪಟ್ಟವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಕಳ್ಳತನವಾಗುವುದಿಲ್ಲ" ಎಂದು ರಾಹುಲ್ ಗಾಂಧಿ ಆರೋಪವನ್ನು ತಳ್ಳಿಹಾಕಿದ್ದಾರೆ.
"ಈ ಹಿಂದೆ ಕೂಡ ಇಂತಹ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ನಡೆದಿವೆ. ವಿಳಾಸ ಬದಲಾಯಿಸಿಕೊಂಡಿರುವ ಮತದಾರರು ನಿಗದಿತ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಹೊಸ ವಿಳಾಸದ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿಕೊಳ್ಳಬಹುದು" ಎಂದು ಹೇಳಿದರು.
"ಮತದಾರರ ಪಟ್ಟಿ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಕೂಡ ತಮ್ಮ ಬೂತ್ ಮಟ್ಟದ ಏಜೆಂಟ್ಗಳನ್ನು (ಬಿಎಲ್ಎ) ನೇಮಿಸಿ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು. ಪ್ರತಿಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳು ಮತದಾರರ ಪಟ್ಟಿಯನ್ನು ಏಕೆ ಪರಿಶೀಲಿಸುತ್ತಿಲ್ಲ? ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಮತದಾರರು ನಿಗದಿತ ಪ್ರಕ್ರಿಯೆ ಅನುಸರಿಸುವ ಮೂಲಕ ಮತ್ತೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬಹುದು" ಎಂದರು.