ಅಮರಾವತಿ,ನ.02 (DaijiworldNews/AK): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮುರಸು’ ಚಂಡಮಾರುತವು ಇಂದು ಮುಂಜಾನೆ ಮತ್ತಷ್ಟು ಪ್ರಬಲಗೊಂಡು ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದೆ. ಈ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ಧಾವಿಸುತ್ತಿದ್ದು, ನೆಲ್ಲೂರು ಮತ್ತು ನರಸಾಪುರ ನಡುವೆ ಇಂದು ಮಧ್ಯರಾತ್ರಿಯಿಂದ ನವೆಂಬರ್ 3ರ ಮುಂಜಾನೆಯ ವೇಳೆಗೆ ಕರಾವಳಿ ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯನ್ನು ದಾಟುವ ಸಮಯದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 120 ಕಿ.ಮೀ ತಲುಪುವ ಎಚ್ಚರಿಕೆ ನೀಡಲಾಗಿದೆ. ಆಂಧ್ರ ಕರಾವಳಿಯನ್ನು ಅಪ್ಪಳಿಸುವ ಮೊದಲು ಇದು ಅತ್ಯಂತ ತೀವ್ರ ಚಂಡಮಾರುತವಾಗಿ ಪ್ರಬಲಗೊಳ್ಳುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಈ ಚಂಡಮಾರುತಕ್ಕೆ ‘ಮುರಸು’ ಎಂಬ ಹೆಸರನ್ನು ಭಾರತವೇ ಸೂಚಿಸಿತ್ತು.
ಭಾರಿ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಇಂದು ಶಾಲೆ ಮತ್ತು ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಿಸಲಾಗಿದೆ.
ತೆಲಂಗಾಣ ರಾಜ್ಯದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 5 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶದ ಜೊತೆಗೆ ಒಡಿಶಾ ರಾಜ್ಯದಲ್ಲೂ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ.