ನವದೆಹಲಿ, ನ.02 (DaijiworldNews/AK):ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಇಂಡಿಯಾ ಬ್ಲಾಕ್ ರ್ಯಾಲಿಯಿಂದಾಗಿ ಸುಮಾರು 11,000 ಕೋಟಿ ರೂ. ವ್ಯವಹಾರ ನಷ್ಟವಾಗಿದೆ ಎಂದು ದೆಹಲಿಯ ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ ಹೇಳಿದೆ.

ದೀಪಾವಳಿ ಹಬ್ಬ ಹಾಗೂ ಶಾಪಿಂಗ್ ಸಮಯದಲ್ಲಿ ರ್ಯಾಲಿ ನಡೆದಿದ್ದರಿಂದ ಸುತ್ತಮುತ್ತಲಿನ ಪ್ರಮುಖ ಮಾರುಕಟ್ಟೆಗಳ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ ಎಂದು ಸಂಘ ತಿಳಿಸಿದೆ. ನ. 1ರಂದು ದೆಹಲಿಯಲ್ಲಿ ಸುಮಾರು 11,000 ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟು ನಷ್ಟವಾಗಿದೆ ಎಂದು CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.
CTI ನೀಡಿರುವ ಅಂದಾಜಿನ ಪ್ರಕಾರ, ಚಿಲ್ಲರೆ ಮತ್ತು ಸಗಟು ವ್ಯಾಪಾರ ಕ್ಷೇತ್ರದಲ್ಲಿ ಸುಮಾರು 8,800 ಕೋಟಿ ಮೌಲ್ಯದ ವಹಿವಾಟು ನಷ್ಟವಾಗಿದೆ. ರಾಮಲೀಲಾ ಮೈದಾನದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿತ್ತು ಎಂದು ಸಂಘ ಹೇಳಿದೆ.
ಇನ್ನೊಂದೆಡೆ, ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ರ್ಯಾಲಿಗೆ ಬಂದವರು ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವಂತೆ ಮನವಿ ಮಾಡಿದ್ದೆವು. ಆದರೆ, ಕನ್ನಾಟ್ ಪ್ಲೇಸ್ಗೆ ಬಂದಾಗ ಬಿಜೆಪಿ ಪ್ರತಿಯೊಂದು ಅಂಗಡಿಯನ್ನೂ ಬಲವಂತವಾಗಿ ಮುಚ್ಚಿಸಿದೆ ಎಂದು ರಾಹುಲ್ ಗಾಂಧಿ ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ.