ಗೋಕರ್ಣ, ನ.02 (DaijiworldNews/TA): ವಾರಾಂತ್ಯದ ಮೋಜು-ಮಸ್ತಿಗಾಗಿ ಗೋಕರ್ಣಕ್ಕೆ ಆಗಮಿಸಿದ್ದ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳ ತಂಡದ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಮೂವರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದು, ಇನ್ನಿಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿತ್ತು. ದುಬ್ಬಣಶಶಿ ಬೀಚ್ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಕೊಚ್ಚಿಹೋಗಿದ್ದಾರೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ರೆಸಾರ್ಟ್ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಐವರನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದು, ಈ ವೇಳೆ ನಾಲ್ವರನ್ನು ದಡಕ್ಕೆ ಕರೆತರಲಾಗಿದೆ. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್ ಮೂಲದ 22 ವರ್ಷದ ಶೋಭಾ ದಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇನ್ನು ತಂಡದ ನಾಯಕ ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಬಳಿಕ ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದೀಗ ಶೋಧದ ವೇಳೆ ಅವರ ಮೃತದೇಹ ಪತ್ತೆಯಾಗಿದೆ. ಇಬ್ಬರು ಉದ್ಯೋಗಿಗಳಾದ ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ. ಘಟನೆಯ ಬೆನ್ನಲ್ಲೇ ಕಡಲತೀರಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಕುರಿತು ರೆಸಾರ್ಟ್ ಮತ್ತು ಹೋಮ್ಸ್ಟೇ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ವಾರಾಂತ್ಯದ ಪ್ರವಾಸದ ಸಂಭ್ರಮದಲ್ಲಿದ್ದ ಐಟಿ ಉದ್ಯೋಗಿಗಳ ತಂಡಕ್ಕೆ ಸಮುದ್ರದ ಭಾರಿ ಅಲೆಗಳು ಸಾವಿನ ರೂಪದಲ್ಲಿ ಅಪ್ಪಳಿಸಿವೆ. ಸಮುದ್ರದ ಅಲೆಗಳ ತೀವ್ರತೆಯನ್ನು ನಿರ್ಲಕ್ಷಿಸಿ ನೀರಿಗಿಳಿಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ದುರಂತ ಮತ್ತೊಮ್ಮೆ ಎಚ್ಚರಿಕೆಯಾಗಿದೆ.