ಬೆಂಗಳೂರು, ನ.02 (DaijiworldNews/AK): ರಾಜ್ಯದಲ್ಲಿ ಕ್ರಾಂತಿ ಆಗುವ ಮೊದಲು ಕಾಂಗ್ರೆಸ್ಸಿನವರು ಅಧಿಕಾರ ಬಿಟ್ಟು ತೊಲಗಲಿ. ಇಲ್ಲದೇ ಇದ್ದರೆ ಏರಿಸಿರುವ ಎಲ್ಲ ಬೆಲೆಯನ್ನು ಕಡಿಮೆ ಮಾಡಿ, ನಮ್ಮ ರೈತರಿಗೆ ನ್ಯಾಯ ಕೊಡಿ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದ್ದಾರೆ.

ಹಾಲಿನ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಸರಕಾರದ ಆಡಳಿತ ಶೂನ್ಯಕ್ಕೆ ಬಂದಿದೆ. ಇವತ್ತು ತಳಮಟ್ಟಕ್ಕೆ ಬಂದಿದೆ. ಆ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳೇ ಕನ್ನಡ ರಾಜ್ಯೋತ್ಸವದ ಕೊಡುಗೆ ಏನು? ಎಂದು ಕೇಳಿದ ಅವರು, ನೀವು ಬಹಳ ದುಡ್ಡಿರುವವರು; ನಿಮ್ಮ ಮನೆಯಲ್ಲಿ ಬಿಸ್ಲೇರಿ ಕುಡಿಯಬಹುದು, ಆದರೆ ನಾವ್ಯಾರೂ ಬಿಸ್ಲೇರಿಯನ್ನು ಕುಡಿಯುವವರಲ್ಲ. ನಾವು ನಮ್ಮ ತಾಯಿ ಕಾವೇರಿಯ ನೀರನ್ನೇ ಕುಡಿಯುತ್ತೇವೆ ಎಂದು ತಿಳಿಸಿದರು.
ನಿಮ್ಮ ಅಂತಸ್ತನ್ನು ನೋಡಿ ರಾಜ್ಯದ ಜನರ ಅಂತಸ್ತು ನಿರ್ಧರಿಸದಿರಿ. ಹಾಲಿಗೆ ನೀವು ದುಡ್ಡು ಕೊಡಬಹುದು, ಆದರೆ ಯಾರು ಇವತ್ತು ದುಡಿದು ತಿಂತಿದ್ದಾರೋ, ಯಾರು ಹೋಟೆಲಲ್ಲಿ ಕೆಲಸ ಮಾಡಿ ಚಿಕ್ಕಪುಟ್ಟ ಸಂಬಳ ತಗೊಂಡು, ಟ್ಯಾಕ್ಸಿ ಓಡಿಸಿಕೊಂಡು, ಆಟೋರಿಕ್ಷಾ ಓಡಿಸಿಕೊಂಡು, ಬೀದಿಬದಿ ವ್ಯಾಪಾರ ಮಾಡಿಕೊಂಡು ಬದುಕುವವರಿಗೆ ಕಷ್ಟವಾಗಿದೆ. ಸಿಕ್ಕಿದ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಬೇಕು, ವಿದ್ಯುತ್ ಬಿಲ್ ಕಟ್ಟಬೇಕು, ನೀರಿನ ಬಿಲ್ ಕಟ್ಟಬೇಕು, ನೀವು ಹಾಕಿದಂತ ಕಸದ ಬಿಲ್ ಕಟ್ಟಬೇಕು. ಅದರ ಜೊತೆಗೆ ಪ್ರತಿವರ್ಷ ನೀವು ಏರಿಸುವ ಹಾಲಿನ ದರಕ್ಕೆ, ಮೊಸರಿನ ದರಕ್ಕೆ ದುಡ್ಡು ಕೊಡಬೇಕಾಗಿದೆ ಎಂದು ಆಕ್ಷೇಪಿಸಿದರು.
ಬರಗಾಲದ ಪರಿಹಾರಕ್ಕೆ ಹಲವಾರು ಷರತ್ತು..
ರಾಜ್ಯದಲ್ಲಿ ಮಳೆ ಬಂದಿಲ್ಲ; ತೀವ್ರ ಬರಗಾಲ ಇದೆ. ಸರಕಾರವು ರೈತರಿಗೆ ಎಕರೆಗೆ ಭಿಕ್ಷೆ ಕೊಟ್ಟ ಹಾಗೆ ಎರಡುವರೆ ಸಾವಿರ ರೂಪಾಯಿ ಕೊಟ್ಟಿದೆ ಎಂದು ಟೀಕಿಸಿದರು. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಕೇಂದ್ರ ಕೊಡುವ ಕಿಸಾನ್ ಸಮ್ಮಾನ್ ಯೋಜನೆಯ ಜೊತೆ 4000 ರೂಪಾಯಿ ಕೊಡುತ್ತಿತ್ತು. ಇವರು ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ರೈತರಿಗೆ ಯಡಿಯೂರಪ್ಪನವರು ಕೊಡುವ ದುಡ್ಡನ್ನು ನಿಲ್ಲಿಸಿದ್ದಾರೆ. ಎರಡುವರೆ ಸಾವಿರ ಭಿಕ್ಷೆಗೆ 17-18 ನಿಯಮಾವಳಿ, ಷರತ್ತು ಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಗೃಹಲಕ್ಷ್ಮಿಯ 5000 ಕೋಟಿ ನಾಪತ್ತೆ
ಹಾಲಿನ ದರವನ್ನು ಹಲವು ಬಾರಿ ಏರಿಸಿದ್ದಾರೆ. ಗ್ಯಾರಂಟಿಗಳೂ ಸರಿಯಾಗಿ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ಹಣ ನಾಪತ್ತೆ ಆಗಿದೆ, ಇವತ್ತಿನ ತನಕ ಲೆಕ್ಕ ಕೊಟ್ಟಿಲ್ಲ ಎಂದು ಅವರು ದೂರಿದರು.
ಬಸ್ಸು ಫ್ರೀ ಎಂದರು. ಬಸ್ಸುಗಳೇ ನಿಂತು ಹೋಗಿವೆ. ಕೆಎಸ್ಆರ್ಟಿಸಿ ಮತ್ತು ಬೇರೆ ಬೇರೆ ವಿಭಾಗಗಳಲ್ಲಿರುವ ಸರಕಾರಿ ಬಸ್ ರಿಪೇರಿ ಮಾಡಲು ದುಡ್ಡಿಲ್ಲ ಮತ್ತು ಡೀಸೆಲ್ ಹಾಕೋಕೆ ದುಡ್ಡಿಲ್ಲ. ಇದು ನಿಮ್ಮ ಸರ್ಕಾರದ ಪರಿಸ್ಥಿತಿ ಎಂದು ಟೀಕಿಸಿದರು.