ಲುಧಿಯಾನ, ನ.02 (DaijiworldNews/AA): ರಜನಿ ಬೆಕ್ಟರ್ ಅವರ ಇಂದಿನ ಸಾವಿರಾರು ಕೋಟಿ ರೂಪಾಯಿಗಳ ಕಂಪನಿ ಆರಂಭವಾಗಿದ್ದು ಯಾವುದೇ ಕಾಪೊರೇಟ್ ಕಚೇರಿಯಲ್ಲಿ ಅಲ್ಲ, ಬದಲಿಗೆ ಪಂಜಾಬ್ನ ಲುಧಿಯಾನದಲ್ಲಿರುವ ಅವರ ಮನೆಯ ಅಡುಗೆಮನೆಯಲ್ಲಿ.

17 ನೇ ವಯಸ್ಸಿನಲ್ಲಿ ಪ್ರಸಿದ್ಧ ಉದ್ಯಮಿ ಕುಟುಂಬಕ್ಕೆ ವಿವಾಹವಾಗಿ ಬಂದ ರಜನಿ ಬೆಕ್ಟರ್ ಅವರು, ಆರಂಭಿಕ ವರ್ಷಗಳನ್ನು ಕುಟುಂಬದ ಪಾಲನೆಯಲ್ಲೇ ಕಳೆದರು. ಮಕ್ಕಳು ಬೋರ್ಡಿಂಗ್ ಶಾಲೆಗೆ ಸೇರಿದ ನಂತರ, ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕರಿ ಕೋರ್ಸ್ ಸೇರುವ ಮೂಲಕ ತಮ್ಮ ಅಡುಗೆ ಪ್ರೀತಿಯನ್ನು ಮುಂದುವರಿಸಲು ನಿರ್ಧರಿಸಿದರು.
1970 ರ ದಶಕದಲ್ಲಿ, ಕೇವಲ 300 ರೂ. ಓವನ್ನಿಂದ ಮತ್ತು ಕೈಯಿಂದ ತಿರುಗಿಸುವ ಐಸ್ಕ್ರೀಮ್ ಯಂತ್ರದೊಂದಿಗೆ, ಅವರು ಸ್ಥಳೀಯ ಸಮಾರಂಭಗಳಿಗೆ ಸಿಹಿತಿಂಡಿ, ಕೇಕ್ ಮತ್ತು ಐಸ್ಕ್ರೀಮ್ಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರ ಖಾದ್ಯಗಳು ಶೀಘ್ರದಲ್ಲೇ ಮನೆಮಾತಾದವು.
ಪತ್ನಿಯ ಪ್ರತಿಭೆ ಹಾಗೂ ಉದ್ಯಮಶೀಲತೆಯನ್ನು ಗುರುತಿಸಿದ ಅವರ ಪತಿ ಧರಂವೀರ್ ಬೆಕ್ಟರ್, 1978 ರಲ್ಲಿ 20,000 ರೂ. ಹೂಡಿಕೆ ಮಾಡಿ ಸಣ್ಣ ಆಹಾರಾ ತಯಾರಿಕಾ ಘಟಕವನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು. ಹೀಗೆ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಉದ್ಯಮವು 'ಕ್ರೆಮಿಕಾ' ಬ್ರ್ಯಾಂಡ್ ಆಗಿ ಬೆಳೆದು, ಉತ್ತರ ಭಾರತದಲ್ಲಿ ಬಿಸ್ಕತ್ತು, ಬ್ರೆಡ್ ಮತ್ತು ಸಾಸ್ಗಳಿಗೆ ಹೆಸರುವಾಸಿಯಾಯಿತು. 1980 ರ ದಶಕದ ವೇಳೆಗೆ, ಕಂಪನಿಯು ಬ್ರೆಡ್ ತಯಾರಿಕಾ ಘಟಕಗಳನ್ನು ಸ್ಥಾಪಿಸಿ, ದಿನಕ್ಕೆ ಸಾವಿರಾರು ಬ್ರೆಡ್ಗಳನ್ನು ತಯಾರಿಸಲು ಪ್ರಾರಂಭಿಸಿತು.
1990 ರ ದಶಕದ ಮಧ್ಯಭಾಗದಲ್ಲಿ ಕಂಪನಿಯ ಬೆಳವಣಿಗೆಗೆ ದೊಡ್ಡ ತಿರುವು ಸಿಕ್ಕಿತು. ಮೆಕ್ಡೊನಾಲ್ಡ್ಸ್ ಭಾರತಕ್ಕೆ ಕಾಲಿಟ್ಟಾಗ, ಅದರ ಬರ್ಗರ್ಗಳಿಗೆ ಬೇಕಾದ ಬನ್ಗಳನ್ನು ಪೂರೈಸುವ ಅವಕಾಶ ಕ್ರೆಮಿಕಾ ಸಂಸ್ಥೆಗೆ ದೊರೆಯಿತು. ಕ್ರೆಮಿಕಾ ಸಂಸ್ಥೆಯು ಮೆಕ್ಡೊನಾಲ್ಡ್ಸ್ಗೆ ಬರ್ಗರ್ ಬನ್, ಸಾಸ್ ಮತ್ತು ಡಿಪ್ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿತು. ಇದು ಬರ್ಗರ್ ಕಿಂಗ್, ಸಬ್ವೇ ಮತ್ತು ಪಿಜ್ಜಾ ಹಟ್ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೂ ಕೆಲಸ ಮಾಡಲು ದಾರಿ ಮಾಡಿಕೊಟ್ಟಿತು.
ಅದರ ನಂತರ, ಕಂಪನಿಯು 'ಇಂಗ್ಲಿಷ್ ಓವನ್' ಎಂಬ ಪ್ರೀಮಿಯಂ ಬ್ರೆಡ್ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ತಂದಿತು. ಇದು ಭಾರತದ ಪ್ರಮುಖ ಬ್ರೆಡ್ ಬ್ರ್ಯಾಂಡ್ಗಳಲ್ಲಿ ಒಂದಾಗಿ ಬೆಳೆಯಿತು. ಮತ್ತೊಂದೆಡೆ, ಕ್ರೆಮಿಕಾದ ಬಿಸ್ಕತ್ತು ಮತ್ತು ಆಹಾರ ಉತ್ಪನ್ನಗಳು ವಿಶ್ವದ 60 ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಪ್ರಾರಂಭಿಸಿದವು. ಡಿಸೆಂಬರ್ 2020 ರಲ್ಲಿ 'ಮಿಸೆಸ್ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಲಿಮಿಟೆಡ್' ಭಾರತೀಯ ಶೇರು ಮಾರುಕಟ್ಟೆಗೆ ಪ್ರವೇಶಿಸಿತು. ಇದರ ಐಪಿಒ 198 ಪಟ್ಟು ಹೆಚ್ಚು ಚಂದಾದಾರಿಕೆ ಪಡೆಯುವ ಮೂಲಕ ಹೊಸ ದಾಖಲೆ ಬರೆಯಿತು.
ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಭಾರತ ಸರ್ಕಾರವು 2021 ರಲ್ಲಿ ರಜನಿ ಬೆಕ್ಟರ್ ಅವರಿಗೆ 'ಪದ್ಮಶ್ರೀ' ನೀಡಿ ಗೌರವಿಸಿತು. ಒಂದು ಓವನ್ನಿಂದ ಉದ್ಯಮ ಪ್ರಾರಂಭಿಸಿ ಸಾವಿರಾರು ಕೋಟಿ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ ಅವರ ಪಯಣವು ಭಾರತದ ಪ್ರತಿಯೊಬ್ಬ ಉದ್ಯಮಿಗೂ ದೊಡ್ಡ ಪ್ರೇರಣೆಯಾಗಿದೆ.