ನವದೆಹಲಿ, ನ.01 (DaijiworldNews/AA): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುವುದು ಮತ್ತು ಅವರು ಜೈಲಿಗೆ ಹೋಗುವುದು ನಿಶ್ಚಿತ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪಿಸಿದ್ದಾರೆ.

ದೆಹಲಿಯ ಐತಿಹಾಸಿಕ ರಾಮ್ಲೀಲಾ ಮೈದಾನದಲ್ಲಿ ನಡೆದ ಇಂಡಿ ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "2024ರ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ಮತದಾರರ ಪಟ್ಟಿಗಳನ್ನು ತಿರುಚುವ ಮೂಲಕ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಮತಗಳನ್ನು ಕಳವು ಮಾಡಿದೆ" ಎಂದು ತಿಳಿಸಿದ್ದಾರೆ.
"ಈ ಮತಗಳ ಕಳವು ಸಾಮಾನ್ಯ ಕಳವ ಅಲ್ಲ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಅಡಗಿಸುವ ದೇಶದ್ರೋಹದ ಕೆಲಸ. ಜ್ಞಾನೇಶ್ ಕುಮಾರ್ ಅವರ ನೆರವಿಲ್ಲದಿದ್ದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಅಥವಾ ಅಮಿತ್ ಶಾ ಅವರು ಗೃಹಸಚಿವರಾಗಲಿ ಆಗುತ್ತಿರಲಿಲ್ಲ. 2024ರ ಲೋಕಸಭಾ ಚುನಾವಣೆಯು ಸಂಪೂರ್ಣವಾಗಿ ನಿಯಮಬಾಹಿರ ಹಾಗೂ ಅಕ್ರಮವಾಗಿತ್ತು" ಎಂದು ಹೇಳಿದರು.
ಇದೇ ರ್ಯಾಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಕೇಂದ್ರ ಹಾಗೂ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ಮತ ಕಳವಿನ ಮೂಲಕ ಅಧಿಕಾರಕ್ಕೆ ಬಂದಿವೆ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು" ಎಂದರು.