ತಿರುವನಂತಪುರಂ, ನ 01 (DaijiworldNews/TA): ದೇವರ ಸ್ವಂತ ನಾಡು ಎಂದೇ ವಿಶ್ವಪ್ರಸಿದ್ಧವಾಗಿರುವ ಕೇರಳ ಇಂದು ತನ್ನ 70ನೇ ರಾಜ್ಯೋತ್ಸವದ ಸಂಭ್ರಮದಲ್ಲಿದೆ. ನವೆಂಬರ್ 1 ಕೇರಳಿಗರಿಗೆ ಅತ್ಯಂತ ವಿಶೇಷವಾದ ದಿನ. ಕೇರಳದ ಜನ್ಮದಿನವೆಂದೇ ಆಚರಿಸಲಾಗುವ 'ಕೇರಳ ಪಿರವಿ ದಿನ'ವನ್ನು ರಾಜ್ಯದಾದ್ಯಂತ ಹಾಗೂ ವಿಶ್ವದ ವಿವಿಧೆಡೆ ನೆಲೆಸಿರುವ ಮಲಯಾಳಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಭಾಷೆ, ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ವಿಶಿಷ್ಟ ಜೀವನಶೈಲಿಯಿಂದ ಗುರುತಿಸಿಕೊಂಡಿರುವ ಕೇರಳದ ಇತಿಹಾಸದಲ್ಲಿ ಈ ದಿನಕ್ಕೆ ವಿಶೇಷ ಸ್ಥಾನವಿದೆ. ಮಲಯಾಳಂ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಪ್ರತ್ಯೇಕ ಕೇರಳ ರಾಜ್ಯವನ್ನು ರಚಿಸಿದ ಐತಿಹಾಸಿಕ ದಿನದ ಸ್ಮರಣಾರ್ಥ ಪ್ರತಿ ವರ್ಷ ನವೆಂಬರ್ 1ರಂದು ಕೇರಳ ಪಿರವಿ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಣ, ಆರೋಗ್ಯ, ಸಾಕ್ಷರತೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ತನ್ನದೇ ಆದ ಮಾದರಿಯನ್ನು ರೂಪಿಸಿರುವ ಕೇರಳ ಇಂದು 70 ವರ್ಷಗಳ ಪಯಣವನ್ನು ಸ್ಮರಿಸುತ್ತಿದೆ.
ಕೇರಳ ರಾಜ್ಯದ ರಚನೆಯ ಹಿಂದೆ ಭಾಷಾವಾರು ಏಕೀಕರಣದ ದೀರ್ಘ ಹೋರಾಟವಿದೆ. ಸ್ವಾತಂತ್ರ್ಯಪೂರ್ವದಲ್ಲಿ ತಿರುವಾಂಕೂರು, ಕೊಚ್ಚಿ ಮತ್ತು ಮಲಬಾರ್ ಪ್ರದೇಶಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿದ್ದವು. 1949ರ ಜುಲೈ 1ರಂದು ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳು ವಿಲೀನಗೊಂಡು ತಿರುವಾಂಕೂರು-ಕೊಚ್ಚಿನ್ ರಾಜ್ಯ ರಚನೆಯಾಯಿತು. ಬಳಿಕ ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆ ಸಂದರ್ಭದಲ್ಲಿ 1956ರ ನವೆಂಬರ್ 1ರಂದು ತಿರುವಾಂಕೂರು-ಕೊಚ್ಚಿನ್ ರಾಜ್ಯದ ಉಳಿದ ಭಾಗಗಳು, ಮಲಬಾರ್ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲ್ಲೂಕನ್ನು ಸೇರಿಸಿ ಕೇರಳ ರಾಜ್ಯವನ್ನು ರಚಿಸಲಾಯಿತು. ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆ-1956ರ ಅಡಿಯಲ್ಲಿ ನಡೆದ ಈ ಐತಿಹಾಸಿಕ ಬೆಳವಣಿಗೆಯಿಂದ ಮಲಯಾಳಂ ಭಾಷಿಕರಿಗೆ ಪ್ರತ್ಯೇಕ ರಾಜ್ಯ ದೊರೆಯಿತು.
ಕೇರಳದಿಂದ 'ಕೇರಳಂ'ಗೆ ಹೆಸರು ಬದಲಾವಣೆ : ಈ ಬಾರಿಯ ಕೇರಳ ಪಿರವಿ ದಿನಕ್ಕೆ ಮತ್ತೊಂದು ವಿಶೇಷವೂ ಇದೆ. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು 'ಕೇರಳಂ' ಎಂದು ಕರೆಯಲಾಗುತ್ತದೆ. ರಾಜ್ಯದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸುವ ಪ್ರಸ್ತಾವನೆಗೆ 2026ರ ಫೆಬ್ರವರಿ 24ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ನಂತರದ ಸಾಂವಿಧಾನಿಕ ಪ್ರಕ್ರಿಯೆಗಳ ಮೂಲಕ ಹೆಸರು ಬದಲಾವಣೆ ಜಾರಿಗೆ ಬಂದಿದ್ದು, 'ಕೇರಳಂ' ಎಂಬ ಹೊಸ ಅಧಿಕೃತ ಹೆಸರಿನೊಂದಿಗೆ ರಾಜ್ಯವು ತನ್ನ 70ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ.
ಪ್ರಕೃತಿ ಸೌಂದರ್ಯದ ತಾಣವಾಗಿರುವ ಕೇರಳವು ಅರಬ್ಬಿ ಸಮುದ್ರದ ತೀರದಿಂದ ಪಶ್ಚಿಮ ಘಟ್ಟಗಳವರೆಗೆ ವಿಸ್ತರಿಸಿದೆ. ಸುಮಾರು 580 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿರುವ ರಾಜ್ಯದಲ್ಲಿ ಒಟ್ಟು 14 ಜಿಲ್ಲೆಗಳಿವೆ. ಕೇರಳವನ್ನು ಕರಾವಳಿ ಪ್ರದೇಶ, ಮಧ್ಯಭೂಮಿ, ಎತ್ತರದ ಗುಡ್ಡಗಾಡು ಪ್ರದೇಶ ಎಂಬುವುದಾಗಿ ಮೂರು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ.
ಹಿನ್ನೀರು, ನದಿಗಳು, ಹಸಿರು ಬೆಟ್ಟಗಳು, ಚಹಾ ತೋಟಗಳು, ತೆಂಗಿನ ಮರಗಳ ಸಾಲು ಮತ್ತು ಸುಂದರ ಕಡಲತೀರಗಳು ಕೇರಳದ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಕೇರಳ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಕೇರಳ ಪಿರವಿ ದಿನದಂದು ರಾಜ್ಯದಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಸಂಘ-ಸಂಸ್ಥೆಗಳಲ್ಲಿ ಮಲಯಾಳಂ ಭಾಷೆ, ಸಾಹಿತ್ಯ ಮತ್ತು ಕೇರಳದ ಇತಿಹಾಸವನ್ನು ಪರಿಚಯಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಸಾಂಪ್ರದಾಯಿಕ ಕಸವು ಉಡುಪು ಧರಿಸಿ, ಮಲಯಾಳಂ ಭಾಷೆಯ ಸೊಗಡಿನೊಂದಿಗೆ ಮಲಯಾಳಿಗಳು ಈ ದಿನವನ್ನು ಆಚರಿಸುತ್ತಾರೆ. ಕಥಕ್ಕಳಿ, ಮೋಹಿನಿಯಾಟ್ಟಂ ಸೇರಿದಂತೆ ಕೇರಳದ ಸಾಂಪ್ರದಾಯಿಕ ಕಲೆಗಳ ಪ್ರದರ್ಶನವೂ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಮಲಯಾಳಿಗಳೂ ವಿವಿಧ ಸಂಘಟನೆಗಳ ಮೂಲಕ ಕೇರಳ ಪಿರವಿ ದಿನವನ್ನು ಆಚರಿಸುತ್ತಾರೆ.
ಕೇರಳ ಪಿರವಿ ಕೇವಲ ರಾಜ್ಯದ ಸಂಸ್ಥಾಪನಾ ದಿನವಲ್ಲ. ಇದು ಮಲಯಾಳಿಗಳ ಭಾಷಾಭಿಮಾನ, ಸಾಂಸ್ಕೃತಿಕ ಒಗ್ಗಟ್ಟು ಮತ್ತು ಐತಿಹಾಸಿಕ ಹೋರಾಟದ ನೆನಪಿನ ದಿನವೂ ಹೌದು. ಏಳು ದಶಕಗಳ ಪಯಣದಲ್ಲಿ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಕೇರಳ ಇಂದು 70ನೇ ವರ್ಷದ ಸಂಭ್ರಮದಲ್ಲಿದೆ. ದೇವರ ಸ್ವಂತ ನಾಡು ಕೇರಳಂಗೆ 70ರ ಸಂಭ್ರಮ. ವಿಶ್ವದಾದ್ಯಂತ ಇರುವ ಸಮಸ್ತ ಮಲಯಾಳಿಗಳಿಗೆ ಕೇರಳ ಪಿರವಿ ದಿನದ ಹಾರ್ದಿಕ ಶುಭಾಶಯಗಳು.