ನವದೆಹಲಿ,ಅ.31 (DaijiworldNews/AK): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ನಾಳೆಯಿಂದ (ನ.1) ಬಿಎಸ್-6 ಮಾನದಂಡಕ್ಕಿಂತ ಕೆಳಗಿನ ಹೊರರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಉಳಿದ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿದೆ.
ದೆಹಲಿ ಹೊರಭಾಗಗಳಲ್ಲಿ ನೋಂದಣಿಯಾಗಿರುವ ಬಿಎಸ್-3 ಮತ್ತು ಬಿಎಸ್-4 ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ದೆಹಲಿ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ನಿರ್ಬಂಧ 2027ರ ಜನವರಿ 31ರವರೆಗೆ ಜಾರಿಯಲ್ಲಿರಲಿದೆ. ಆದರೆ ಬಿಎಸ್-6 ವಾಹನಗಳು, ಸಿಎನ್ಜಿ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ದೆಹಲಿಯಲ್ಲೇ ನೋಂದಣಿಯಾಗಿರುವ ವಾಹನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಹಾಲು, ತರಕಾರಿ, ಹಣ್ಣು, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೂ ನಿರ್ಬಂಧದಿಂದ ವಿನಾಯಿತಿ ಕಲ್ಪಿಸಲಾಗಿದೆ.
ಇದೇ ವೇಳೆ ದೆಹಲಿಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಹೊಂದಿರುವುದು ಕಡ್ಡಾಯವಾಗಿದೆ. ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ವಿತರಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.