ಬೆಂಗಳೂರು, ಅ.31 (DaijiworldNews/AA): ಮೂಡುಬಿದಿರೆಯ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ. ಜಿ. ಅವರು ಭಾರತದ 28 ರಾಜ್ಯಗಳನ್ನು ಪ್ರತಿನಿಧಿಸುವ 28 ವಿಭಿನ್ನ ಭಾಷೆಗಳಲ್ಲಿ ನಿರಂತರ 28 ಗಂಟೆಗಳ ಕಾಲ ಹಾಡುವ ಮೂಲಕ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಏಕತೆ, ಸಮಗ್ರತೆ ಮತ್ತು ಸಮೃದ್ಧ ಭಾಷಾ ವೈವಿಧ್ಯತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಅಪರೂಪದ ಸಂಗೀತ ಸಾಧನೆಯನ್ನು ಕೈಗೊಳ್ಳಲಾಗಿತ್ತು.











ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಅಂಗವಾಗಿ ಅಕ್ಟೋಬರ್ 28 ರಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಡಾ. ರಾಜ್ಕುಮಾರ್ ಸಭಾಂಗಣದಲ್ಲಿ ಈ ಗಾಯನ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು. ಯಶವಂತ್ ಅವರು ವಾದ್ಯವೃಂದದೊಂದಿಗೆ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ದೇಶಭಕ್ತಿಪರ ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಅಕ್ಟೋಬರ್ 29 ರಂದು ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಹಾಡುವ ಮೂಲಕ 28 ಗಂಟೆಗಳ ಕಠಿಣ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಯಶವಂತ್ ಅವರು ಈ ಸಾಧನೆ ಮಾಡುವ ಮೂಲಕ ಅವರದ್ದೇ ಹಿಂದಿನ ದಾಖಲೆಯನ್ನು ಮುರಿದಿದೆ. ಕಳೆದ ವರ್ಷ ಜೂನ್ 3 ಮತ್ತು 4 ರಂದು ದಂತಕಥೆ ಹಿನ್ನೆಲೆ ಗಾಯಕ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಜಯಂತಿಯ ನಿಮಿತ್ತ ಮಂಗಳೂರಿನ ಟೌನ್ ಹಾಲ್ನಲ್ಲಿ ನಿರಂತರ 24 ಗಂಟೆಗಳ ಕಾಲ ಹಾಡುವ ಮೂಲಕ ಯಶವಂತ್ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದ್ದರು. ಇದೀಗ 28 ಗಂಟೆಗಳ ಕಾಲ ಹಾಡುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಮೀರಿಸಿದ್ದಾರೆ.
ಕಾರ್ಯಕ್ರಮದುದ್ದಕ್ಕೂ ಅನುಭವೀ ಸಂಗೀತಗಾರರ ತಂಡವು ವಾದ್ಯಸಹಕಾರ ನೀಡಿತು. ಗಿಟಾರ್ನಲ್ಲಿ ರಾಜಗೋಪಾಲ್ ಆಚಾರ್ಯ, ರಿದಮ್ ಪ್ಯಾಡ್ನಲ್ಲಿ ವಾಮನ್, ತಬಲಾದಲ್ಲಿ ಪ್ರಜ್ವಲ್ ಆಚಾರ್ಯ ಮತ್ತು ವೀಕ್ಷಿತ್ ಕೊಡಂಚ, ಕೊಳಲಿನಲ್ಲಿ ವರ್ಷಾ ಆಚಾರ್ಯ ಮತ್ತು ಗಣೇಶ್, ಸಿತಾರ್ನಲ್ಲಿ ಸುಮುಖ್ ಆಚಾರ್ಯ ಹಾಗೂ ಕೀಬೋರ್ಡ್ನಲ್ಲಿ ಮೆಲ್ವಿನ್ ಸಾಥ್ ನೀಡಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವೈಷ್ಣೋಯ್ ಅವರು ಯಶವಂತ್ ಅವರ ಸಾಧನೆಯನ್ನು ಗುರುತಿಸಿ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಉದ್ಘಾಟಿಸಿದರು. ಮಹಾಲಕ್ಷ್ಮಿಪುರಂ ಶಾಸಕ ಗೋಪಾಲಯ್ಯ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸತೀಶ್ ಮುಳ್ಳೂರು ಹಾಗೂ ಉಡುಪಿಯ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಹರ್ಷ ಮುತ್ತಾಲಿಕ್, ಪ್ರಕಾಶ್ ಮಲ್ಪೆ, ಸುದರ್ಶನ್ ಮೂಡುಬಿದಿರೆ, ಉಡುಪಿ ಆರಾಧ್ಯ ಸಂಸ್ಥೆಯ ಉದ್ಯಮಿ ಸಂದೀಪ್, ಬೆಂಗಳೂರಿನ ಸುಜನ್ ಮೂರ್ತಿ, ಬೆಂಗಳೂರಿನ ಭರತ್ ಶೆಟ್ಟಿ, ಅಪೇಕ್ಷಾ ಜೈನ್ ಮತ್ತು ಮಾತೋಶ್ರೀ ಹೇಮಾವತಿ ಸೇರಿದಂತೆ ಹಲವು ಗಣ್ಯರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಅರುಣಾ ಭಟ್ ಮೊಗಸಾಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಗೀತ ಪ್ರೇಮಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದರು.