ಪಣಜಿ, ಅ.31 (DaijiworldNews/TA): ಕಾನೂನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಗೋವಾದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಗೋವಾದ ರಿಬಂದರ್ನಲ್ಲಿರುವ ಅಪರಾಧ ಶಾಖೆಯ (ಕ್ರೈಂ ಬ್ರಾಂಚ್) ಕಚೇರಿಯಲ್ಲೇ 16 ವರ್ಷದ ಬಾಲಕಿಯ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಮಹಿಳೆಯ ಸಹಕಾರದೊಂದಿಗೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ವಿಕಾಸ್ ದೇಕರ್ ಮತ್ತು ರಂಜಿನಿ ಪಾಲ್ಯೇಕರ್ ಎಂಬವರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಜುಲೈ 25 ಮತ್ತು ಅಕ್ಟೋಬರ್ 27ರಂದು ರಿಬಂದರ್ನಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಈ ಘಟನೆಗಳು ನಡೆದಿವೆ ಎನ್ನಲಾಗಿದೆ.
ಆರಂಭದಲ್ಲಿ ಬಾಲಕಿ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಳು. ಈ ದೂರನ್ನು ಬಳಿಕ ಪೊಲೀಸ್ ಇನ್ಸ್ಪೆಕ್ಟರ್ ವಿಕಾಸ್ ದೇಕರ್ ಅವರಿಗೆ ರವಾನಿಸಲಾಗಿತ್ತು. ಆದರೆ, ಇದೇ ಅಧಿಕಾರಿಯ ವಿರುದ್ಧ ಬಾಲಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಕಚೇರಿಯೊಳಗೆ ತಮ್ಮ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ದೂರು ದಾಖಲಿಸಿದ್ದಾಳೆ.
ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 75 (ಲೈಂಗಿಕ ಕಿರುಕುಳ), ಸೆಕ್ಷನ್ 127 (ತಪ್ಪಾದ ಬಂಧನ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 10 (ತೀವ್ರ ಲೈಂಗಿಕ ದೌರ್ಜನ್ಯ) ಮತ್ತು ಸೆಕ್ಷನ್ 12 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗಳು ಕ್ರೈಂ ಬ್ರಾಂಚ್ ಕಚೇರಿಯ ಆವರಣದಲ್ಲೇ ನಡೆದಿವೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಹಳೆ ಗೋವಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೋವಾ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಪೊಲೀಸ್ ಇಲಾಖೆಯಲ್ಲಿ ದುರ್ವರ್ತನೆಗೆ ದಾಕ್ಷಿಣ್ಯರಹಿತ ನೀತಿ ಅನುಸರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆರೋಪಿತ ಅಧಿಕಾರಿ ಹಾಗೂ ಅವರಿಗೆ ಸಹಕರಿಸಿದವರ ವಿರುದ್ಧ ಕಾನೂನು ಕ್ರಮದ ಜೊತೆಗೆ ಇಲಾಖಾ ಕ್ರಮವನ್ನೂ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸ್ ಇಲಾಖೆಯ ಕಚೇರಿಯಲ್ಲೇ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.