ನವದೆಹಲಿ, ಅ.31 (DaijiworldNews/TA): ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿರುವ ಅನುಭವಿ ಫೈಟರ್ ಪೈಲಟ್ ಆಗಿರುವ ಅವರು, ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಉತ್ತರಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

20ಕ್ಕೂ ಹೆಚ್ಚು ಬಗೆಯ ವಿಮಾನಗಳಲ್ಲಿ 3,500 ಗಂಟೆಗಳಿಗೂ ಅಧಿಕ ಹಾರಾಟದ ಅನುಭವ ಹೊಂದಿರುವ ದೀಕ್ಷಿತ್, ಭಾರತೀಯ ವಾಯುಪಡೆಯ ಪ್ರಮುಖ ಕಾರ್ಯತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 43 ವರ್ಷಗಳ ಸುದೀರ್ಘ ಸೇವೆಯ ಬಳಿಕ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ವಾಯುಪಡೆಯಿಂದ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ರೇಸ್ ಕೋರ್ಸ್ ವಾಯುಪಡೆ ನಿಲ್ದಾಣದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಅಶುತೋಷ್ ದೀಕ್ಷಿತ್ ಅವರಿಗೆ ವಾಯುಪಡೆಯ ಮುಖ್ಯಸ್ಥರ ಜವಾಬ್ದಾರಿ ಹಸ್ತಾಂತರಿಸಲಾಯಿತು. ಈ ಹಿಂದೆ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ದೀಕ್ಷಿತ್, ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ.
1966ರ ಡಿಸೆಂಬರ್ 9ರಂದು ಜನಿಸಿದ ಅಶುತೋಷ್ ದೀಕ್ಷಿತ್ ಅವರು 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಬಾಂಗ್ಲಾದೇಶದ ರಕ್ಷಣಾ ಸಿಬ್ಬಂದಿ ಸೇವಾ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ತರಬೇತಿ ಪಡೆದಿದ್ದಾರೆ. ಮಿರಾಜ್-2000, ಮಿಗ್ ಸರಣಿಯ ವಿಮಾನಗಳು, ಕಿರಣ್, ಜಾಗ್ವಾರ್, ಐಎಲ್-78, ಹಾಕ್ ಮತ್ತು ತೇಜಸ್ ಸೇರಿದಂತೆ ಹಲವು ಬಗೆಯ ವಿಮಾನಗಳನ್ನು ಚಲಾಯಿಸಿದ ಅನುಭವ ಇವರಿಗಿದೆ. ಇವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಹಾಗೂ ಅರ್ಹ ಹಾರಾಟ ಬೋಧಕರೂ ಆಗಿದ್ದಾರೆ.
ತಮ್ಮ ಸುದೀರ್ಘ ಸೇವಾವಧಿಯಲ್ಲಿ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಮತ್ತು ಆಪರೇಷನ್ ಸಿಂಧೂರ್ ಸೇರಿದಂತೆ ಹಲವು ಪ್ರಮುಖ ಸೇನಾ ಕಾರ್ಯಾಚರಣೆಗಳು ಹಾಗೂ ಅಭ್ಯಾಸಗಳಲ್ಲಿ ದೀಕ್ಷಿತ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಾಯುಪಡೆಯ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ತರಬೇತಿ ವಿಭಾಗಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸೆಂಟ್ರಲ್ ಏರ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಇದೀಗ ಭಾರತೀಯ ವಾಯುಪಡೆಯ ಅತ್ಯುನ್ನತ ಹುದ್ದೆಯ ಜವಾಬ್ದಾರಿ ಹೊತ್ತಿರುವ ಅಶುತೋಷ್ ದೀಕ್ಷಿತ್ ಅವರ ಮುಂದಿನ ಕಾರ್ಯತಂತ್ರಗಳು ಮತ್ತು ವಾಯುಪಡೆಯ ಆಧುನೀಕರಣದ ನಿಟ್ಟಿನಲ್ಲಿನ ಕ್ರಮಗಳ ಕುರಿತು ನಿರೀಕ್ಷೆಗಳು ಮೂಡಿವೆ.