ಚೆನ್ನೈ, ಅ.31 (DaijiworldNews/AA): ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಿಂದ 17 ಖೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ನಿರ್ಲಕ್ಷ್ಯ ಮತ್ತು ಭದ್ರತಾ ಲೋಪದ ಆರೋಪದ ಹಿನ್ನೆಲೆಯಲ್ಲಿ ಉಪಜೈಲಿನ ಪ್ರಭಾರ ಉಪ ಅಧೀಕ್ಷಕರನ್ನು ಅಮಾನತುಗೊಳಿಸುವಂತೆ, ಜೈಲು ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಿಎಂ ಸಿ.ಜೋಸೆಫ್ ವಿಜಯ್ ಆದೇಶಿಸಿದ್ದಾರೆ.

ಅಕ್ಟೋಬರ್ 26ರಂದು ಥೇಣಿ ಜಿಲ್ಲೆಯ ಉಪಜೈಲಿನಲ್ಲಿ ಈ ಘಟನೆ ನಡೆದಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿಯ ನಾಟಕವಾಡಿದ 17 ವಿಚಾರಣಾಧೀನ ಖೈದಿಗಳು, ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದರು. ಬಳಿಕ ಪರಾರಿಯಾಗಿದ್ದ ಎಲ್ಲಾ 17 ಕೈದಿಗಳನ್ನು ಹಲವು ಪೊಲೀಸ್ ತಂಡಗಳನ್ನು ರಚಿಸಿ ಸೆರೆ ಹಿಡಿಯಲಾಗಿತ್ತು.
ಈ ಘಟನೆ ಸಂಬಂಧ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿರುವ ಸಿಎಂ ವಿಜಯ್, ಜೈಲಿನಲ್ಲಿರುವ ಖೈದಿಗಳ ಮೇಲೆ ಸರಿಯಾದ ನಿಗಾ ವಹಿಸದಿರುವುದು, ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳೇ ಈ ಘಟನೆಗೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಅಧಿಕಾರಿಯೂ ಸಂಪೂರ್ಣ ಬದ್ಧತೆ, ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಜೈಲು ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಆಲಸ್ಯ ಅಥವಾ ಬೇಜವಾಬ್ದಾರಿತನ ತೋರಿದ ಯಾವುದೇ ಅಧಿಕಾರಿಯನ್ನು ಸರ್ಕಾರ ಸಹಿಸುವುದಿಲ್ಲ. ಅಂತಹವರ ವಿರುದ್ಧ ಅತ್ಯಂತ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ವಿಜಯ್ ಎಚ್ಚರಿಕೆ ನೀಡಿದ್ದಾರೆ.