ಬೆಂಗಳೂರು, ಅ.31 (DaijiworldNews/TA): ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೋಟೆಲ್ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಿಲ್ಟನ್ ಸಮೂಹಕ್ಕೆ ಸೇರಿದ ನಗರದ ಕಾನ್ರಾಡ್ ಹೋಟೆಲ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇಬ್ಬರನ್ನು ರಕ್ಷಿಸಲು ಮುಂದಾದ ಅಮೆರಿಕದ ಪ್ರಜೆ ಹಾಗೂ ಭಾರತೀಯ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಮೃತರನ್ನು ಜರ್ಮನಿ ಮೂಲದ 57 ವರ್ಷದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಮತ್ತು ಸ್ಲೋವಾಕಿಯಾ ಮೂಲದ 45 ವರ್ಷದ ಜುರಾಜ್ ಹೊರ್ವಾಟ್ ಎಂದು ಗುರುತಿಸಲಾಗಿದೆ. ಅಲೆಕ್ಸಾಂಡರ್ ಥೀಸ್ ಅವರು ಲುಫ್ಥಾನ್ಸಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಾಗಿದ್ದರೆ, ಜುರಾಜ್ ಹೊರ್ವಾಟ್ ಅವರು ತಂತ್ರಜ್ಞಾನ ಸಂಸ್ಥೆ ಐಬಿಎಂನಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಸಂಜೆ ಇಬ್ಬರೂ ಹೋಟೆಲ್ನ ಮೂರನೇ ಮಹಡಿಯಲ್ಲಿರುವ ಈಜುಕೊಳಕ್ಕೆ ತೆರಳಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ವಿದ್ಯುತ್ ಸ್ಪರ್ಶದಿಂದ ಇಬ್ಬರೂ ಗಂಭೀರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈಜುಕೊಳದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲು ಮುಂದಾದ 41 ವರ್ಷದ ಅಮೆರಿಕದ ಪ್ರಜೆ ಮ್ಯಾಥ್ಯೂ ಡೆಸಾಂಟಿಸ್ ಹಾಗೂ 28 ವರ್ಷದ ಭಾರತೀಯ ಪೂಲ್ ಅಟೆಂಡೆಂಟ್ ರಾಹುಲ್ ತಿವಾರಿ ಅವರಿಗೂ ವಿದ್ಯುತ್ ಸ್ಪರ್ಶವಾಗಿದೆ. ಗಾಯಗೊಂಡ ಇಬ್ಬರನ್ನೂ ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈಜುಕೊಳದಲ್ಲಿ ವಿದ್ಯುತ್ ಅವಘಡ ಸಂಭವಿಸಲು ಕಾರಣವೇನು? ವಿದ್ಯುತ್ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ? ಎಂಬ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ. ಘಟನೆ ಕುರಿತು ಹೋಟೆಲ್ ಆಡಳಿತ ಮಂಡಳಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ, ಅಕ್ಟೋಬರ್ 31ರಿಂದ ನವೆಂಬರ್ 30ರವರೆಗೆ ನಿರ್ವಹಣಾ ಕಾರ್ಯಗಳಿಗಾಗಿ ಈಜುಕೊಳವನ್ನು ಮುಚ್ಚಲಾಗುವುದು ಎಂಬ ಮಾಹಿತಿ ಹೋಟೆಲ್ನ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. 24 ಅಂತಸ್ತಿನ ಐಷಾರಾಮಿ ಪಂಚತಾರಾ ಹೋಟೆಲ್ನಲ್ಲಿ ಸಂಭವಿಸಿರುವ ಈ ದುರಂತವು ಅತಿಥಿಗಳ ಸುರಕ್ಷತೆ ಮತ್ತು ಹೋಟೆಲ್ನ ವಿದ್ಯುತ್ ನಿರ್ವಹಣಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ತನಿಖೆಯಿಂದ ಘಟನೆಯ ನಿಖರ ಕಾರಣ ಬಹಿರಂಗವಾಗಬೇಕಿದೆ.