ಉತ್ತರ ಕನ್ನಡ, ಅ.31 (DaijiworldNews/TA): ಮೀನಿನ ವಿಷಾನಿಲಕ್ಕೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಮತ್ತೊಂದು ಮೀನುಗಾರಿಕಾ ಬಂದರಿನಲ್ಲಿ ಅಂತಹುದೇ ದುರಂತ ಸಂಭವಿಸಿದೆ. ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಮೀನಿನ ಶೇಖರಣಾ ಘಟಕದಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಉಸಿರುಗಟ್ಟಿ ಒರಿಸ್ಸಾ ಮೂಲದ ಇಬ್ಬರು ಮೀನುಗಾರರು ಮೃತಪಟ್ಟಿದ್ದು, ಮತ್ತೋರ್ವ ಮೀನುಗಾರ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.

ಬೇಲೆಕೇರಿ ಮೂಲದ 'ಮೂಕಾಂಬಿಕಾ' ಹೆಸರಿನ ಬೋಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಮನ್ ಜಾತಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದ ಮೀನುಗಾರರು, ಬೋಟ್ನ ಶೇಖರಣಾ ಘಟಕದಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಕೋಲ್ಡ್ ಸ್ಟೋರೇಜ್ ಘಟಕದಿಂದ ಹೊರಹೊಮ್ಮಿದ ತೀವ್ರ ವಿಷಾನಿಲ ಹಾಗೂ ದುರ್ವಾಸನೆಗೆ ಮೀನುಗಾರರು ಸಿಲುಕಿದ್ದಾರೆ. ಪರಿಣಾಮ, ಒರಿಸ್ಸಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದೇ ವೇಳೆ ಗಂಭೀರವಾಗಿ ಅಸ್ವಸ್ಥಗೊಂಡ ಲಾಲಿಂದರ ಧ್ರುವ (41) ಅವರನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಂದರ್ಭದಲ್ಲಿ ಮತ್ತಿಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕೇವಲ ಮೂರು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಚಮನ್ ಮೀನಿನಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಈ ಘಟನೆ ಜಿಲ್ಲೆಯ ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿತ್ತು. ಇದೀಗ ಮುದಗಾ ಬಂದರಿನಲ್ಲಿಯೂ ಅದೇ ರೀತಿಯ ದುರಂತ ಮರುಕಳಿಸಿರುವುದು ಮೀನುಗಾರರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೋಟ್ಗಳಲ್ಲಿರುವ ಮೀನಿನ ಶೇಖರಣಾ ಘಟಕಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಷಾನಿಲದ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವುದು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಸರಣಿ ಘಟನೆಗಳು ಮತ್ತೊಮ್ಮೆ ನೆನಪಿಸಿವೆ.