ಅಮರಾವತಿ, ಅ.31 (DaijiworldNews/AA): ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಬಲಪಡಿಸಲು ಇಸ್ರೋ 'ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್' (ಜಿಎಸ್ಎಲ್ವಿ-ಎಫ್18) ರಾಕೆಟ್ ಮೂಲಕ ಮುಂದಿನ ತಲೆಮಾರಿನ ಎನ್ವಿಎಸ್-03 ಉಪಗ್ರಹವನ್ನು ಶ್ರೀಹರಿಕೋಟಾದಿಂದ ಶುಕ್ರವಾರ ರಾತ್ರಿ 11:51ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-03 ಅನ್ನು ಜಿಎಸ್ಎಲ್ವಿ-ಎಫ್18 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಉಡಾವಣೆಯಾದ 20 ನಿಮಿಷಗಳಿಗೂ ಹೆಚ್ಚು ಸಮಯದ ಬಳಿಕ ಜಿಎಸ್ಎಲ್ವಿ ರಾಕೆಟ್ ಎನ್ವಿಎಸ್-03 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. 2,250 ಕೆ.ಜಿ. ತೂಕದ ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಎನ್ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆಗಾಗಿ ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಪ್ರಧಾನಿ ಮೋದಿ ಅಭಿನಂದನೆ. ಈ ಕಾರ್ಯಾಚರಣೆಯು ನಮ್ಮ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ಎನ್ವಿಎಸ್-03 ಉಪಗ್ರಹವು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸುವ ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡುವುದರ ಜೊತೆಗೆ, ಜನರಿಗೆ ಪ್ರಯೋಜನಕಾರಿಯಾಗುವ ನ್ಯಾವಿಗೇಷನ್ ಸೇವೆಗಳನ್ನು ಒದಗಿಸಲು ನೆರವಾಗಲಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣೆ ಮತ್ತು ನಾವೀನ್ಯತೆ ದೇಶಕ್ಕೆ ನಿರಂತರವಾಗಿ ಹೆಮ್ಮೆ ತರುತ್ತಿವೆ" ಎಂದು ತಿಳಿಸಿದ್ದಾರೆ.
"ಉಪಗ್ರಹವನ್ನು ನಿಗದಿತ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಮತ್ತು ನಿಖರವಾಗಿ ನೆಲೆಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಈ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದ ಅವರು, ಸ್ವದೇಶಿ ಹಾಗೂ ಅತ್ಯಂತ ನಿಖರವಾದ ಸಮಯ ಮತ್ತು ಸಂಚರಣೆ ಸೇವೆಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ. ಭಾರತವು ಈಗ 'ಒಂದು ರಾಷ್ಟ್ರ, ಒಂದು ಸಮಯ' ಎಂಬ ಗುರಿಯತ್ತ ಇನ್ನಷ್ಟು ಹತ್ತಿರವಾಗಬಲ್ಲದು" ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ಹೇಳಿದ್ದಾರೆ.
ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-03ನ ಪ್ರಯೋಜನಗಳು:
ಎನ್ವಿಎಸ್-03 ಇಸ್ರೋದ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಸರಣಿಯ ಮೂರನೇ ಉಪಗ್ರಹವಾಗಿದೆ. ಇದು 'ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್'(ಐಆರ್ಎನ್ಎಸ್ಎಸ್)ನ ಹನ್ನೆರಡನೇ ಉಪಗ್ರಹವಾಗಿದ್ದು, ಇದನ್ನು ಐಆರ್ಎನ್ಎಸ್ಎಸ್-1ಎಲ್ ಎಂದೂ ಕರೆಯಲಾಗುತ್ತದೆ.
ಭಾರತೀಯ ಉಪಗ್ರಹ ಸಮೂಹದ ಮೂಲಕ ನ್ಯಾವಿಗೇಷನ್ ಸೇವೆಗಳ ನಿರಂತರತೆಯನ್ನು ಖಚಿತಪಡಿಸುವುದು ಮತ್ತು ಅವುಗಳ ಲಭ್ಯತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಗಳು ನಾಗರಿಕ, ವಾಣಿಜ್ಯ ಮತ್ತು ಕಾರ್ಯತಂತ್ರದ ಬಳಕೆಗಳಿಗೆ ಅತ್ಯಂತ ಮಹತ್ವದ್ದಾಗಿರುವ ಈ ಸಂದರ್ಭದಲ್ಲಿ, ಭಾರತದ ಸ್ವತಂತ್ರ ಸ್ಥಳ ನಿರ್ಣಯ, ನ್ಯಾವಿಗೇಷನ್ ಮತ್ತು ಸಮಯ ನಿರ್ಣಯ ಸಾಮರ್ಥ್ಯಗಳನ್ನು ಬಲಪಡಿಸಲು ಈ ಕಾರ್ಯಾಚರಣೆ ಸಹಾಯಕವಾಗಲಿದೆ.
ಅಮೆರಿಕದ ಜಿಪಿಎಸ್ನಂತಹ ನ್ಯಾವಿಗೇಷನ್ ವ್ಯವಸ್ಥೆಗಳಿಗೆ ಭಾರತದ ಸ್ವದೇಶಿ ಪರ್ಯಾಯವೇ ನಾವಿಕ್. ಭಾರತದ ಮುಖ್ಯ ಭೂಭಾಗದಾದ್ಯಂತ ಹಾಗೂ ದೇಶದ ಭೌಗೋಳಿಕ ಗಡಿಗಳಿಂದ ಸುಮಾರು 1,500 ಕಿಲೋಮೀಟರ್ಗಳವರೆಗೆ ಸ್ಥಳ ನಿರ್ಣಯ ಮತ್ತು ಸಮಯ ನಿರ್ಣಯ ಸೇವೆಗಳನ್ನು ಒದಗಿಸುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ರಸ್ತೆ ಮತ್ತು ಸಮುದ್ರ ಮಾರ್ಗದ ನ್ಯಾವಿಗೇಷನ್ನಿಂದ ಹಿಡಿದು ವಿಪತ್ತು ನಿರ್ವಹಣೆ, ನಿಖರ ಕೃಷಿ ಹಾಗೂ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಕಾರ್ಯಾಚರಣೆಗಳವರೆಗೆ ನಾವಿಕ್ ಹಲವು ಕ್ಷೇತ್ರಗಳಲ್ಲಿ ಉಪಯೋಗವಾಗುತ್ತದೆ.