ಬೆಂಗಳೂರು, ಅ.30 (DaijiworldNews/AK):ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಅರಿವಾಗುತ್ತಿದೆ ಎಂದು ನನಗೂ ಅನಿಸಿದೆ; ಕಾದು ನೋಡೋಣ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.


ಇಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪ್ರಚಲಿತ ರಾಜಕೀಯ ಪರಿಸ್ಥಿತಿ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದೆವು. ಅವರೂ ಸಹ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅನಿವಾರ್ಯ ಕಾರಣದಿಂದ ಕುಮಾರಸ್ವಾಮಿಯವರು ಬರೋಕೆ ಆಗಿಲ್ಲ. ಅವರಿಗೆಲ್ಲ ಸಂಗತಿಗಳು ಗೊತ್ತಿದೆ. ಇಲ್ಲಿ ಬರೋದು, ಎಲ್ಲಾ ಸಂಗತಿಗಳು ನಾನು ಮಾತನಾಡಿದ್ದೇನೆ ಎಂದು ನುಡಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತ ಪ್ರಶ್ನಗೆ ಉತ್ತರಿಸಿದ ಅವರು, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ದೇವೇಗೌಡ ಜೀ ಅವರು ಒಟ್ಟಾಗಿ ಕುಳಿತು ತೀರ್ಮಾನಿಸುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಒಟ್ಟಾಗಿ ಒಂದಾಗಿ ಹೋರಾಟ ಮಾಡಬೇಕು; ಇದರಿಂದ ಮತ್ತೆ ನಾವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಅಭಿಪ್ರಾಯ ದೇವೇಗೌಡರದು ಎಂದು ನುಡಿದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುವುದೇ ಎಂದು ವರದಿಗಾರರು ಪ್ರಶ್ನಿಸಿದರು. ಅವನ್ನು ಮುಂದೆ ಚರ್ಚಿಸುವುದಾಗಿ ತಿಳಿಸಿದರು.
ಇವತ್ತು ಈ ರಾಜ್ಯದ ಪ್ರಚಲಿತ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಕುಮಾರಸ್ವಾಮಿಯವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಉಳಿದ ಮುಖಂಡರ ಜೊತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದರು. ದೀಪಾವಳಿ ಶುಭಾಶಯಗಳನ್ನು ಹೇಳಿ ಬಂದಿದ್ದೇನೆ. ತಮ್ಮೆಲ್ಲರಿಗೂ ಸಹ ದೀಪಾವಳಿ ಶುಭಾಶಯಗಳು ಎಂದು ತಿಳಿಸಿದರು.
ಮಧ್ಯಂತರ ಚುನಾವಣೆ ಅಥವಾ ಸಿಎಂ ಬದಲಾವಣೆ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಅವರಲ್ಲಿನ ಗೊಂದಲ, ಬಡಿದಾಟ, ಕಿತ್ತಾಟ ನೋಡಿದ್ದೇವೆ. ಪದೇ ಪದೇ ದೆಹಲಿಗೆ ಹೋಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿದ್ದಾರೆ. ಇವೆಲ್ಲ ನೋಡಿದರೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಅನ್ನುವಂತ ವಾತಾವರಣ ಇವತ್ತಿದೆ. ಏನಾಗುತ್ತೆ ಅಂತ ಕಾದು ನೋಡೋಣ ಎಂದರು.
ಇವತ್ತು ಬಸ್ಸುಗಳಿಗೆ ಡೀಸೆಲ್ ಕೊಡೋಕೂ ದುಡ್ಡಿಲ್ಲ ಎಂಬಂಥ ದುಸ್ಥಿತಿ ಬಂದಿದೆ. ಹಣಕಾಸಿನ ಸ್ಥಿತಿ ಹದಗೆಟ್ಟು ಹೋಗಿದೆ ಎಂದ ಅವರು, ಜನ ಕೊಟ್ಟಂತಹ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ? ಯಾಕೆ ಈ ದುಸ್ಥಿತಿ ಬಂದಿದೆ? ಎಂದು ಪ್ರಶ್ನಿಸಿದರು. ಅಧಿಕಾರದಲ್ಲಿ ಇರುವಂತಹ ಈ ಸರ್ಕಾರಕ್ಕೆ ಯಾವುದರ ಬಗ್ಗೆಯೂ ಯೋಚನೆ ಮಾಡಲು ಪುರಸೊತ್ತಿಲ್ಲ. ಇದು ತುಂಬಾ ನೋವು ತರುವಂತಹ ಸಂಗತಿ ಎಂದು ತಿಳಿಸಿದರು. ಹಿಂದೆಂದೂ ಈ ದುಸ್ಥಿತಿ ಕರ್ನಾಟಕಕ್ಕೆ ಬಂದಿರಲಿಲ್ಲ. ಈಗ ಆ ದುಸ್ಥಿತಿಯನ್ನು ನಾವು ನೀವೆಲ್ಲ ಎದುರಿಸುತ್ತಾ ಇದ್ದೇವೆ. ಜನ ಏನು ತೀರ್ಮಾನ ಮಾಡುತ್ತಾರೆ ಅನ್ನೋದು ಈಗಾಗಲೇ ಸ್ಪಷ್ಟವಾಗಿ ಗೋಚರ ಆಗುತ್ತಿದೆ ಎಂದು ತಿಳಿಸಿದರು.