ಬೆಂಗಳೂರು, ಅ.30 (DaijiworldNews/AK): ಯುವ ಸಮುದಾಯಕ್ಕೆ ಎಸ್ಐಆರ್ ಕುರಿತಂತೆ ಸರಿಯಾದ ಮಾಹಿತಿ ನೀಡಿ ಕಾಂಗ್ರೆಸ್ಸಿನ ಅರಾಜಕತೆಯ ಮನಸ್ಥಿತಿಯನ್ನು ಬಯಲು ಮಾಡುವ ಉದ್ದೇಶದಿಂದ ನ.1ರಿಂದ ನ.30ರವರೆಗೆ ಕಾಲೇಜು ವಿದ್ಯಾರ್ಥಿಗಳು, ಯುವಜನರ ನಡುವೆ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಅಭಿಯಾನವನ್ನು ಮಾಡಲಿದ್ದೇವೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶದಲ್ಲಿ ಎಸ್ಐಆರ್ ವಿಚಾರದ ಮೂಲಕ ಯುವಕರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ಯುವಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಯುವಜನರ ನಡುವೆ ದೊಡ್ಡ ಸಂವಾದ ಗೋಷ್ಠಿಗಳನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ವಿವರಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವಜನರನ್ನು ಕಣ್ಮುಂದೆ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದ್ದಾರೆ. 7 ಐಐಟಿಗಳ ಸ್ಥಾಪನೆ, ತ್ರಿಬಲ್ ಐಐಟಿಗಳನ್ನು 16 ಕಡೆ ಆರಂಭಿಸಲಾಗಿದೆ. 8 ಕಡೆ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. 2014ಕ್ಕೆ ಮೊದಲು ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. 12 ವರ್ಷಗಳಲ್ಲಿ 431 ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೋದಿಯವರು ಕೌಶಲ್ಯಾಭಿವೃದ್ಧಿಯ ಹೊಸ ಸಚಿವಾಲಯ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಸ್ಟಾರ್ಟಪ್ ಸಂಖ್ಯೆಗಳೂ ಹೆಚ್ಚಾಗಿವೆ. 2,12,283 ಸ್ಟಾರ್ಟಪ್ಗಳು ಆರಂಭವಾಗಿವೆ. ಈ ಪೈಕಿ 21,601 ಕರ್ನಾಟಕದಲ್ಲೇ ಆರಂಭಗೊಂಡಿವೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರಿಗಾಗಿ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಆದರೆ, ಕಾಂಗ್ರೆಸ್ ಯುವಜನರ ಮನಸ್ಸನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಭಾರತವನ್ನು ಬಾಂಗ್ಲಾ, ಶ್ರೀಲಂಕಾ, ಫ್ರಾನ್ಸ್ ಮಾಡಲು, ಇಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ
ನ.3ರಂದು ಹುಬ್ಬಳ್ಳಿ, 5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಇದೆ. ರಾಜ್ಯದೆಲ್ಲೆಡೆ ವಿವಿಧ ಹಂತಗಳಲ್ಲಿ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ಪ್ರಕಟಿಸಿದರು.
ಕಾಂಗ್ರೆಸ್ಸಿನದೇ ಯೋಜನೆಗಳನ್ನು ಪರಿಷ್ಕರಿಸುವ ಸರಕಾರ, ಮತದಾರರ ಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ಯಾಕೆ ವಿರೋಧ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಎಸ್ಐಆರ್, ಚುನಾವಣಾ ಆಯೋಗದ ಕಾನೂನುಬದ್ಧ ಚಟುವಟಿಕೆ. ಇದನ್ನು ನೆಪವಾಗಿ ಇಟ್ಟುಕೊಂಡು, ಸುಪ್ರೀಂ ಕೋರ್ಟ್ ಹೇಳಿದಂತೆ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಂಘರ್ಷಕ್ಕೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ಎಸ್ಐಆರ್ ಕಾರಣಕ್ಕೆ ಕೇರಳದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್
ಪ್ರಶ್ನೆಗೆ ಉತ್ತರಿಸಿದ ಅವರು, ವಾಸ್ತವಿಕತೆ ಜನರಿಗೆ ಗೊತ್ತಾಗಬೇಕಿದೆ. ಇದೇ ಎಸ್ಐಆರ್ ಕಾರಣಕ್ಕೆ ಕಾಂಗ್ರೆಸ್ ಕೇರಳದಲ್ಲಿ ಅಧಿಕಾರಕ್ಕೆ ಬಂದಿದೆ. ಇವಿಎಂ ಸರಿ ಇಲ್ಲ ಎಂದು ಆರಂಭದಲ್ಲಿ ಕಾಂಗ್ರೆಸ್ ತಿಳಿಸಿತು. ನಂತರ ಮತಪತ್ರ ಬೇಕೆಂದರು. ಮತದಾರರ ಪಟ್ಟಿ ಸರಿ ಇಲ್ಲ ಎಂದು ದೂರಿದ್ದರು. ಈಗ ಎಸ್ಐಆರ್ ಸರಿ ಇಲ್ಲ ಎನ್ನುತ್ತಾರೆ. ಉತ್ತರ ಪ್ರದೇಶದ ಚುನಾವಣೆ ಬಳಿಕ ಮತದಾರರೇ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.