ಡೆಹ್ರಾಡೂನ್, ಅ.30 (DaijiworldNews/AK): ಉತ್ತರಾಖಂಡದಲ್ಲಿರುವ ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪ ಪತನಗೊಂಡಿದ್ದು, ಬೆಂಗಳೂರಿನ ಐವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಕೂಡ ಒಬ್ಬರಾಗಿದ್ದಾರೆ.

ದುರಂತದಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಲಂಕಿ ಸಾವನ್ನಪ್ಪಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಚಾರ್ಧಾಮ್ ಪ್ರವಾಸಕ್ಕೆ ತೆರಳಿದ್ದ ಅರುಣ್ ಸಾಲಂಕಿ ದುರಂತದಲ್ಲಿ ಸಾವಿಗೀಡಾಗಿದ್ದಾರೆ.
ಇನ್ನೂ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ಜೋಶಿಮಠ ಸಮೀಪದ ಚಾಯೀ ಗ್ರಾಮದ ಬಳಿ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತ ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಮಾಹಿತಿ ಬಂದಿದೆ.
ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್ಡಿಆರ್ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನಾನು ಇಡೀ ಘಟನೆಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಗಂಭೀರವಾಗಿ ಗಾಯಗೊಂಡವರನ್ನ ಉತ್ತಮ ಚಿಕಿತ್ಸೆಗಾಗಿ ತಕ್ಷಣವೇ ಏರ್ ಲಿಫ್ಟ್ ಮಾಡಲು ಸೂಚನೆ ನೀಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.