ಗುಜರಾತ್, ಅ.30 (DaijiworldNews/AA): ಜನಸೇವೆಯ ಬಗ್ಗೆ ತಮ್ಮ ಬದ್ಧತೆ ಅಚಲವಾಗಿರಲಿದೆ, ಜೀವನದ ಕೊನೆಯ ಕ್ಷಣದವರೆಗೂ ಜನರ ಸೇವೆಯಲ್ಲಿ ತೊಡಗಿರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಗುಜರಾತ್ನ ಬನಸ್ಕಾಂಠಾ ಜಿಲ್ಲೆಯ ಭಿಲ್ಡಿಯಲ್ಲಿ ದೇಶೀಯ ಜಾನುವಾರು ಸಂತಾನೋತ್ಪತ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ಸಂಕಷ್ಟ ಎದುರಿಸುತ್ತಿರುವಾಗ ಕೆಲವರು ಅದರಲ್ಲಿ ಸಂತೋಷ ಕಾಣುತ್ತಿದ್ದಾರೆ. ತಮ್ಮ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
"ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಆದ್ಯತೆ ನೀಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯ ಹೊರೆಯನ್ನು ರೈತರ ಮೇಲೆ ಬೀಳದಂತೆ ನೋಡಿಕೊಂಡಿದೆ. ಜಾಗತಿಕ ಅನಿಶ್ಚಿತತೆಯ ನಡುವೆ ರಸಗೊಬ್ಬರಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಆದರೆ, ನಮ್ಮ ಸರ್ಕಾರ ಆ ಬೆಲೆ ಏರಿಕೆಯ ಹೊರೆಯನ್ನು ರೈತರ ಮೇಲೆ ಬೀಳಲು ಅವಕಾಶ ನೀಡಲಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಕೇಂದ್ರ ಸರ್ಕಾರವು ಸಣ್ಣ ರೈತರಿಗೆ 4.5 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ವಿತರಿಸಿದೆ" ಎಂದರು.
ಇನ್ನು "ಇರಾನ್ ಯುದ್ಧ ಆರಂಭವಾದ ಬಳಿಕ ರೈತರಿಗೆ ರಸಗೊಬ್ಬರದ ಕೊರತೆ ಎದುರಾಗಲಿದೆ ಹಾಗೂ ಜನರಿಗೆ ಅಡುಗೆ ಅನಿಲ ಸಿಲಿಂಡರ್ಗಳು ಸಿಗುವುದಿಲ್ಲ ಎಂಬ ವದಂತಿಗಳನ್ನು ಹರಡಲಾಯಿತು" ಎಂದು ತಿಳಿಸಿದರು.