ವಿರಾಜಪೇಟೆ, ಅ.30 (DaijiworldNews/TA): ಚಲಿಸುತ್ತಿದ್ದ ಬಸ್ನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡು ರಕ್ತಸ್ರಾವ ಆರಂಭವಾದಾಗ, ಸಮಯಪ್ರಜ್ಞೆ ಮೆರೆದ ಖಾಸಗಿ ಬಸ್ ಸಿಬ್ಬಂದಿ ತಕ್ಷಣ ಬಸ್ ಅನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ತಾಯಿ ಮತ್ತು ಮಗುವಿನ ಜೀವ ರಕ್ಷಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

ಮಡಿಕೇರಿಯಿಂದ ವಿರಾಜಪೇಟೆಗೆ ಸಂಚರಿಸುತ್ತಿದ್ದ 'ರಾಣಿ' ಹೆಸರಿನ ಖಾಸಗಿ ಬಸ್ನಲ್ಲಿ ಅಸ್ಸಾಂ ಮೂಲದ ಸುರ್ಜಾ ಬಾನು ಎಂಬ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಬಸ್ ಮೂರ್ನಾಡು ಸಮೀಪ ತಲುಪುತ್ತಿದ್ದಂತೆ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡು ರಕ್ತಸ್ರಾವ ಆರಂಭವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ರಾಜೇಶ್ ಹಾಗೂ ನಿರ್ವಾಹಕ ಕಿಶನ್ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಗರ್ಭಿಣಿಯನ್ನು ಬಸ್ನಲ್ಲೇ ಸುರಕ್ಷಿತವಾಗಿ ಮಲಗಿಸಿ, ಮಾರ್ಗಮಧ್ಯೆ ಎಲ್ಲಿಯೂ ನಿಲ್ಲಿಸದೆ ನೇರವಾಗಿ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದಾರೆ.
ಪ್ರಯಾಣಿಕರ ಸಹಕಾರದೊಂದಿಗೆ ಬಸ್ಸನ್ನು ನೇರವಾಗಿ ಆಸ್ಪತ್ರೆಯ ಆವರಣಕ್ಕೆ ಕೊಂಡೊಯ್ದ ಸಿಬ್ಬಂದಿ, ತಕ್ಷಣವೇ ಮಹಿಳೆಯನ್ನು ವೈದ್ಯರ ವಶಕ್ಕೆ ಒಪ್ಪಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಸುರ್ಜಾ ಬಾನು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸಿದ್ದರಿಂದ ತಾಯಿ ಮತ್ತು ಮಗು ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಪ್ರಜ್ಞೆ, ಮಾನವೀಯತೆ ಮೆರೆದ ಬಸ್ ಚಾಲಕ ರಾಜೇಶ್ ಹಾಗೂ ನಿರ್ವಾಹಕ ಕಿಶನ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.