ಉತ್ತರ ಪ್ರದೇಶ, ಅ.30 (DaijiworldNews/TA): ಗಂಡನ ದೀರ್ಘಾಯುಷ್ಯಕ್ಕಾಗಿ ಪತ್ನಿಯರು ಉಪವಾಸ ಆಚರಿಸುವ ಕರ್ವಾ ಚೌತ್ ಹಬ್ಬವನ್ನು ಜೈಲಿನಲ್ಲಿದ್ದರೂ ಐವರು ಮಹಿಳಾ ಕೈದಿಗಳು ಸಾಂಪ್ರದಾಯಿಕವಾಗಿ ಆಚರಿಸಿದ್ದಾರೆ. ಉತ್ತರ ಪ್ರದೇಶದ ಲಲಿತಪುರ ಜಿಲ್ಲಾ ಕಾರಾಗೃಹದಲ್ಲಿ ಈ ವಿಶೇಷ ಆಚರಣೆ ನಡೆದಿದ್ದು, ಮಹಿಳಾ ಕೈದಿಗಳಿಗಾಗಿ ಜೈಲು ಆಡಳಿತವೇ ಅಗತ್ಯ ವ್ಯವಸ್ಥೆಗಳನ್ನು ಮಾಡಿರುವುದು ಗಮನ ಸೆಳೆದಿದೆ.


ಐವರು ಮಹಿಳಾ ಕೈದಿಗಳ ಪೈಕಿ ಇಬ್ಬರು ತಮ್ಮ ಗಂಡಂದಿರೊಂದಿಗೆ ಜೈಲಿನಲ್ಲೇ ಕರ್ವಾ ಚೌತ್ ಆಚರಿಸಲು ಅವಕಾಶ ಪಡೆದರೆ, ಉಳಿದ ಮೂವರು ಮೊಬೈಲ್ ಫೋನ್ನಲ್ಲಿ ಗಂಡಂದಿರ ಛಾಯಾಚಿತ್ರಗಳನ್ನು ವೀಕ್ಷಿಸಿ ಉಪವಾಸ ಪೂರ್ಣಗೊಳಿಸಿದ್ದಾರೆ. ಮಹಿಳಾ ಕೈದಿಗಳು ಹಬ್ಬ ಆಚರಿಸಲು ಜೈಲು ಆಡಳಿತ ವಿಶೇಷ ವ್ಯವಸ್ಥೆ ಮಾಡಿತ್ತು. ಜೈಲು ಅಧೀಕ್ಷಕ ಪ್ರಶಾಂತ್ ಉಪಾಧ್ಯಾಯ ಅವರು ಕೈದಿಗಳ ಕಲ್ಯಾಣ ನಿಧಿಯಿಂದ ಮೆಹಂದಿ, ಬಳೆಗಳು, ಸಾಂಪ್ರದಾಯಿಕ ಉಡುಪುಗಳು, ಪೂಜಾ ಸಾಮಗ್ರಿಗಳು, ಹಣ್ಣುಗಳು ಹಾಗೂ ಸಿಹಿತಿಂಡಿಗಳನ್ನು ಒದಗಿಸಿದ್ದರು. ಬೆಳಗ್ಗಿನಿಂದಲೇ ಮಹಿಳಾ ಬ್ಯಾರಕ್ಗಳಲ್ಲಿ ಹಬ್ಬದ ಸಿದ್ಧತೆಗಳು ಆರಂಭವಾಗಿದ್ದವು. ಕೈದಿಗಳು ಪರಸ್ಪರ ಮೆಹಂದಿ ಹಚ್ಚಿಕೊಂಡು, ಸಾಂಪ್ರದಾಯಿಕ ಉಡುಗೆ ತೊಟ್ಟು, ಮಹಿಳಾ ಜೈಲು ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕರ್ವಾ ಚೌತ್ ಕಥೆ ಕೇಳಲು ಮತ್ತು ಪೂಜೆ ಸಲ್ಲಿಸಲು ಜೈಲು ಆವರಣದಲ್ಲೇ ಪ್ರತ್ಯೇಕ ಸ್ಥಳವನ್ನೂ ವ್ಯವಸ್ಥೆ ಮಾಡಲಾಗಿತ್ತು. ಚಂದ್ರೋದಯದ ಬಳಿಕ ಜರಡಿ ಮೂಲಕ ಚಂದ್ರನನ್ನು ವೀಕ್ಷಿಸಿ, ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ ಮಹಿಳೆಯರು ಉಪವಾಸ ಮುರಿದರು. ಬಳಿಕ ಜೈಲು ಆಡಳಿತದ ವತಿಯಿಂದ ಹಣ್ಣು ಹಾಗೂ ಉಪಾಹಾರವನ್ನು ನೀಡಲಾಯಿತು.
ಜೈಲು ಅಧಿಕಾರಿಗಳ ಪ್ರಕಾರ, ಚಂದಾ ಮತ್ತು ಪುಷ್ಪಾ ಎಂಬ ಇಬ್ಬರು ಮಹಿಳೆಯರ ಗಂಡಂದಿರು ಕೂಡ ಇದೇ ಕಾರಾಗೃಹದಲ್ಲಿದ್ದಾರೆ. ಹೀಗಾಗಿ ಕರ್ವಾ ಚೌತ್ ಆಚರಣೆಯ ವೇಳೆ ದಂಪತಿಗಳು ಒಟ್ಟಿಗೆ ಸೇರಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ಇನ್ನುಳಿದ ಮೂವರು ಮಹಿಳೆಯರಿಗೆ ಅವರ ಗಂಡಂದಿರ ಛಾಯಾಚಿತ್ರಗಳನ್ನು ಮೊಬೈಲ್ನಲ್ಲಿ ತೋರಿಸುವ ಮೂಲಕ ಸಂಪ್ರದಾಯದಂತೆ ಪೂಜೆ ಹಾಗೂ ಉಪವಾಸದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನೆರವಾಗಲಾಯಿತು.
ಈ ಐವರು ಮಹಿಳೆಯರು ವಿಭಿನ್ನ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಕೆಲವರು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಪಂಚಮ್ ಸಿಂಗ್ ಅವರ ಪತ್ನಿ ಜಲೇಬ್ ರಾಜಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಿತ್ತು ಅವರ ಪತ್ನಿ ಚಂದಾ ಎನ್ಡಿಪಿಎಸ್ ಕಾಯ್ದೆಯಡಿ 12 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಹರಿಕಿಶನ್ ಅವರ ಪತ್ನಿ ಪುಷ್ಪಾ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರೆ, ಮುಲಾಯಂ ಅವರ ಪತ್ನಿ ಚಾಂದನಿ ಮತ್ತು ಜಗದೀಶ್ ಅವರ ಪತ್ನಿ ರೀನಾ ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ಜೈಲು ಅಧೀಕ್ಷಕ ಪ್ರಶಾಂತ್ ಉಪಾಧ್ಯಾಯ, ಜೈಲು ಕೇವಲ ಶಿಕ್ಷೆ ನೀಡುವ ಸ್ಥಳವಲ್ಲ, ಅದು ಸುಧಾರಣೆಯ ಕೇಂದ್ರವೂ ಹೌದು ಎಂದು ಹೇಳಿದ್ದಾರೆ. ಕೈದಿಗಳ ಧಾರ್ಮಿಕ ನಂಬಿಕೆಗಳು ಹಾಗೂ ಭಾವನಾತ್ಮಕ ಅಗತ್ಯಗಳನ್ನು ಗೌರವಿಸುವುದು ಅವರ ಪುನರ್ವಸತಿ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ. ರಕ್ಷಾ ಬಂಧನ, ಈದ್ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲೂ ಜೈಲು ಆಡಳಿತ ಕೈದಿಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತದೆ. ಕುಟುಂಬದಿಂದ ದೂರವಿದ್ದರೂ ತಮ್ಮ ಸಂಪ್ರದಾಯವನ್ನು ಪಾಲಿಸಲು ಅವಕಾಶ ಕಲ್ಪಿಸಿರುವ ಜೈಲು ಆಡಳಿತದ ಕ್ರಮ ಇದೀಗ ಗಮನ ಸೆಳೆದಿದೆ.